ADVERTISEMENT

ಪೂರ್ಣ ಬಹುಮತದಿಂದ ಮಾತ್ರ ಕೋಮುವಾದ ನಿಗ್ರಹ ಸಾಧ್ಯ: ಹಿಮಂತ ಬಿಸ್ವಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 7 ಮೇ 2023, 4:54 IST
Last Updated 7 ಮೇ 2023, 4:54 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಬೆಳ್ತಂಗಡಿ/ಉಜಿರೆ : 'ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಬೇಕು. ಇದರಿಂದ ಸುಸ್ಥಿರ ಆಡಳಿತ ಮೂಲಕ ಕೋಮುವಾದವನ್ನು ಮಟ್ಟ ಹಾಕಿ ವಿಕಾಸ ಕಾರ್ಯ ಮುಂದುವರಿಸಲು ಸಾಧ್ಯ. ಈ ಬಾರಿ ಕರ್ನಾಟಕದಲ್ಲಿ ಪಕ್ಷಕ್ಕೆ 150 ಸೀಟು ಸಿಗವಂತಾಗಬೇಕು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಉಜಿರೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಪರವಾಗಿ ಶನಿವಾರ ರೋಡ್ ಶೋ ನಡೆಸಿ ಅವರು ಮತಯಾಚಿಸಿದರು

‘ಪ್ರಿಯಾಂಕಾ ಗಾಂಧಿ ಮುಸಲ್ಮಾನರಿಗಾಗಿ ಈಗ ಅಳುತ್ತಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶೇ 13 ರಷ್ಟು ಮೀಸಲಾತಿ ನೀಡುತ್ತೇವೆ ಎಂದಿದ್ದಾರೆ. ನೀವು ಹತ್ತು ಬಾರಿ ಜನ್ಮ ತಾಳಿದರೂ ಕರ್ನಾಟಕದಲ್ಲಿ ಇದನ್ನು ಎಂದಿಗೂ ಬಿಡುವುದಿಲ್ಲ’ ಎಂದರು.

ADVERTISEMENT

‘ಕಾಂಗ್ರೆಸ್ಸಿಗರು ಮೀಸಲಾತಿ ನೀಡುವುದಾದರೆ ಹಿಂದೂಗಳಿಗೆ, ಜೈನರಿಗೆ, ಬೌದ್ಧರಿಗೂ , ಕ್ರೈಸ್ತರಿಗೂ ನೀಡಲಿ. ನೀವು ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿ ತುಷ್ಟೀಕರಣವನ್ನೇಕೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಮದ್ರಸಗಳಲ್ಲಿ ಶಿಕ್ಷಣ ಪಡೆದವರು ನಮ್ಮ ದೇಶಕ್ಕೆ ಎಂದಿಗೂ ಬೇಡ. ಅಲ್ಲಿ ವೈದ್ಯರು, ಎಂಜಿನಿಯರ್‌ಗಳು ತಯಾರಾಗುವುದಿಲ್ಲ.‌ ಹೀಗಾಗಿ‌ ನಾನು ಅಸ್ಸಾಂ ಮುಖ್ಯಮಂತ್ರಿಯಾಗಿ ಬಂದ ಎರಡು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು  ಮದ್ರಸಗಳನ್ನು ಮುಚ್ಚಿಸಿದ್ದೇನೆ.‌ ಈಗ ಮಧ್ಯಪ್ರದೇಶದಲ್ಲೂ ಈ ಕೆಲಸ ನಡೆಯುತ್ತಿದೆ’ ಎಂದರು.

‘ಬಿಜೆಪಿಯು ಪಿಎಫ್ಐ ನಿಷೇಧಿಸಿದಂತೆ ನಾವು ಬಜರಂಗವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಪಿಎಫ್ಐ ಏನು ನಿಮ್ಮ ಮಗನಾ, ಮಗಳಾ ಎಂದು ಪ್ರಶ್ನಿಸಿದರು. ‘ಪಿಎಫ್ಐಯನ್ನು ನಿಷೇಧಿಸದಿದ್ದರೆ ಪ್ರತಿದಿನ ಸ್ಲೀಪರ್ ಸೆಲ್‌ಗಳು ತಲೆ ಎತ್ತುತ್ತಿದ್ದವು. ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಯೊಂದಿಗೆ ಸೇರಿ ಕೊಂಡ ಕಾಂಗ್ರೆಸ್ಸನ್ನು ಶಿಕ್ಷಿಸಲೇ ಬೇಕು’ ಎಂದರು.

‘ಪಕ್ಷದ ಅಭ್ಯರ್ಥಿ ಹರೀಶ್ ಪೂಂಜ ಉಜಿರೆಯಲ್ಲಿ‌ ವಿಮಾನನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.  ಐದು ವರ್ಷಗಳಲ್ಲಿ ₹ 3500  ಕೋಟಿಗೂ ಹೆಚ್ಚು  ಅನುದಾನ ತಂದಿದ್ದಾರೆ. ಇಲ್ಲಿನ ಹಳ್ಳಿಗಳ ಮೂಲೆಮೂಲೆಗಳಿಗೂ ರಸ್ತೆ, ವಿದ್ಯುತ್‌, ನೀರಾವರಿ ಕಲ್ಪಿಸಿದ್ದಾರೆ’ ಎಂದರು. ಅವರನ್ನು 60 ಸಾವಿರ ಮತಗಳಿಂದ ಗೆಲ್ಲಿಸಬೇಕು’ ಎಂದರು.

ಅಸ್ಸಾಂಗೆ ಅಲ್ಲಿನ ಕಾಮಾಕ್ಯದೇವಿಯ ದರ್ಶನ ಪಡೆಯುವಂತೆ ವರು ಕೋರಿದರು.

ಹರೀಶ್ ಪೂಂಜ ಮಾತನಾಡಿ, ‘ಐದು ವರ್ಷಗಳಲ್ಲಿ ರಾಜ್ಯ ಗುರುತಿಸುಂತೆ ಅಭಿವೃದ್ಧಿ ಮಾಡಿದ್ದೇನೆ’ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಮುಖರಾದ ಕುಶಾಲಪ್ಪ ಗೌಡ, ಬಿರುವೆರ್‌ ಕುಡ್ಲ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಪ್ರಮುಖರಾದ ಯತೀಶ್ ಆರ್ವರ್, ಶಿವಪ್ರಸಾದ್ ಮಲೆಬೆಟ್ಟು ಇದ್ದರು.
ಉಜಿರೆ ಎಸ್.ಡಿ.ಎಂ.ಕಾಲೇಜಿನ ಎದುರಿನಿಂದ ಜನಾರ್ದನ ಸ್ವಾಮಿ ದೇವಸ್ಥಾನದವರೆಗೆ ರೋಡ್ ಶೋ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.