ADVERTISEMENT

ಉತ್ತರ ಕರ್ನಾಟಕದಲ್ಲಿ ನೆರೆ ಹಾನಿ ಎಫೆಕ್ಟ್‌ | ಕರಾವಳಿಯಲ್ಲಿ ಬಸ್ ರೂಟ್ ಕಟ್!

ಹರ್ಷವರ್ಧನ ಪಿ.ಆರ್.
Published 18 ಸೆಪ್ಟೆಂಬರ್ 2019, 19:30 IST
Last Updated 18 ಸೆಪ್ಟೆಂಬರ್ 2019, 19:30 IST
   

ಮಂಗಳೂರು: ಉತ್ತರ ಕರ್ನಾಟದಲ್ಲಿನ ನೆರೆ ಹಾನಿಯ ಪರಿಣಾಮ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ವ್ಯತ್ಯಯವಾಗಿದೆ.

ಈ ಮೂರು ಜಿಲ್ಲೆಗಳು ಕೆಎಸ್‌ಆರ್‌ಟಿಸಿಯ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ಒಳಪಟ್ಟಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಚಾಲಕ ಹಾಗೂ ನಿರ್ವಾಹಕರು ಇದ್ದಾರೆ. ಈಚೆಗೆ ಸುರಿದ ಭಾರಿ ಮಳೆ ಹಾಗೂ ನೆರೆಗೆ ಅವರ ಮನೆ, ಕೃಷಿ ಹಾನಿಯಾಗಿದ್ದು, ರಜಾ ಮೇಲೆ ತೆರಳಿದ್ದಾರೆ. ಇದರಿಂದಾಗಿ ಕೆಎಸ್‌ಆರ್‌ಟಿಸಿಯು ಬಸ್ ರೂಟ್ (ಸಂಚಾರ)ಗಳನ್ನು ರದ್ದು ಮಾಡಿದೆ.

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಮಂಗಳೂರು– 1, 2,3 ಹಾಗೂ ಉಡುಪಿ ಮತ್ತು ಕುಂದಾಪುರ ಡಿಪೊಗಳನ್ನು ಹೊಂದಿದರೆ, ಪುತ್ತೂರು ವಿಭಾಗವು ಧರ್ಮಸ್ಥಳ, ಪುತ್ತೂರು, ಬಿ.ಸಿ.ರೋಡು, ಸುಳ್ಯ ಹಾಗೂ ಮಡಿಕೇರಿ ಡಿಪೊಗಳನ್ನು ಒಳಗೊಂಡಿದೆ. ಈ ಪೈಕಿ ಪುತ್ತೂರು, ಬಿ.ಸಿ.ರೋಡು ಹಾಗೂ ಮಂಗಳೂರು ಘಟಕದಲ್ಲಿ ಹೆಚ್ಚಿನ ಚಾಲಕರು ಹಾಗೂ ನಿರ್ವಾಹಕರು ಹೆಚ್ಚಿನ ಸಂಖ್ಯೆಯಲ್ಲಿ ರಜೆ ಮೇಲೆ ತೆರಳಿದ್ದಾರೆ.

ADVERTISEMENT

ಸದ್ಯ, ಪುತ್ತೂರು ವಿಭಾಗದ ಒಟ್ಟು 1,815 ಚಾಲಕ–ನಿರ್ವಾಹಕರ ಪೈಕಿ 78 ಹಾಗೂ ಮಂಗಳೂರು ವಿಭಾಗದ 1,900 ಪೈಕಿ 132 ಮಂದಿ ದೀರ್ಘಕಾಲಿನ ರಜೆಯಲ್ಲಿದ್ದಾರೆ. ಪುತ್ತೂರು ವಿಭಾಗದ 565 ರೂಟ್‌ಗಳ ಪೈಕಿ, 20 ಹಾಗೂ ಮಂಗಳೂರಿನ 550ಯಲ್ಲಿ 13 ರೂಟ್‌ಗಳು ಸಂಪೂರ್ಣ ಸ್ಥಗಿತಗೊಂಡಿವೆ. ಉಳಿದಂತೆ, ಹಲವು ರೂಟ್‌ಗಳಲ್ಲಿ ಸಮಯ ವ್ಯತ್ಯಯ, ಅಲ್ಪ ಬದಲಾವಣೆ ಮತ್ತಿತರ ಹೊಂದಾಣಿಕೆಗಳನ್ನು ಮಾಡಲಾಗಿದೆ.

‘ನೆರೆಹಾನಿಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಹಲವಾರು ಬಸ್ ರೂಟ್‌ಗಳನ್ನು ರದ್ದುಗೊಳಿಸಿದ್ದೆವು. ಅದರಿಂದ ಸಾಕಷ್ಟು ನಷ್ಟವಾಗಿತ್ತು. ಅಲ್ಲದೇ, ಸಂತ್ರಸ್ತರ ಪೈಕಿ ನಮ್ಮ ಚಾಲಕ–ನಿರ್ವಾಹಕರ ಕುಟುಂಬಗಳೂ ಇವೆ. ಹೀಗಾಗಿ, ಹಲವರು ರಜೆ ಮೇಲೆ ಹೋಗಿದ್ದರು. ಆಗ ಹೆಚ್ಚಿನ ರೂಟ್‌ಗಳು ಸ್ಥಗಿತಗೊಂಡಿದ್ದವು. ಈಗ ಕೆಲವರು ವಾಪಸ್ ಬಂದಿದ್ದು, ರಜೆ ಹೊಂದಾಣಿಕೆ ಮೂಲಕ ನಿಭಾಯಿಸುತ್ತಿದ್ದೇವೆ’ ಎಂದು ಮಂಗಳೂರು ವಿಭಾಗೀಯ ನಿಯಂತ್ರಕ ಅರುಣ್ ಎಸ್.ಎನ್. ತಿಳಿಸಿದರು.

‘ಶೇ 50ರಷ್ಟು ಚಾಲಕ–ನಿರ್ವಾಹಕರು ಉತ್ತರ ಕರ್ನಾಟಕದವರು. ಹೀಗಾಗಿ, ಕರ್ತವ್ಯವನ್ನು ಪರಿಗಣಿಸಿಕೊಂಡು, ಹೊಂದಾಣಿಕೆ ಮೇಲೆ ರಜೆ ಹೋಗುತ್ತಿದ್ದಾರೆ. ಉಳಿದ ಸಿಬ್ಬಂದಿ ಸಹಕಾರದ ಮೂಲಕ ರೂಟ್‌ಗಳು ವ್ಯತ್ಯಯವಾಗದಂತೆ ನಿಭಾಯಿಸುತ್ತಿದ್ದೇವೆ’ ಎಂದು ಪುತ್ತೂರು ವಿಭಾಗೀಯ ಸಹಾಯಕ ಸಂಚಾರ ಅಧೀಕ್ಷಕ ಭಾಸ್ಕರ ತೊಕ್ಕೊಟ್ಟು ತಿಳಿಸಿದರು.

ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಇಬ್ಬರು ನಿರ್ವಾಹಕರು ಮನೆ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.