ಈಶ್ವರ ಖಂಡ್ರೆ
ಮಂಗಳೂರು: ‘ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಮಂಗಳವಾರ ಇಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಆರ್‌ಝಡ್ ಜಾರಿಗೂ ಮುನ್ನ ಮತ್ತು ಆ ನಂತರ ಸಾಕಷ್ಟು ಅಕ್ರಮ ಕಟ್ಟಡಗಳು ತಲೆ ಎತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೂ ದೂರು ಸಲ್ಲಿಕೆಯಾಗಿವೆ. ಹೀಗಾಗಿ ಸಮಗ್ರ ವರದಿಗೆ ಸೂಚಿಸಲಾಗಿದೆ ಎಂದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಕ್ರಮ ಹೋಂ ಸ್ಟೇ, ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮ ನಿಶ್ಚಿತ ಎಂದು ಸಚಿವರು ಹೇಳಿದರು.
ಈ ಭಾಗದಲ್ಲಿ ಕಡಲ ಕೊರೆತ ತಡೆಗೆ ಅಗತ್ಯವಿರುವೆಡೆ ಮ್ಯಾಂಗ್ರೋವ್ (mangroves) ಪೊದೆಗಳನ್ನು ಬೆಳೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾಗಿಯೂ ತಿಳಿಸಿದರು.
ಜಂಟಿ ಸರ್ವೆ: ಅರಣ್ಯ ಮತ್ತು ಕಂದಾಯ ಜಮೀನು ಗುರುತಿಸಲು ಉಭಯ ಇಲಾಖೆಗಳಿಂದ ಜಂಟಿ ಸರ್ವೆ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಂಗಳವಾರದಿಂದ ಸರ್ವೆ ಆರಂಭವಾಗಿದೆ. ಕಂದಾಯ ಜಮೀನನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ ಎಂಬ ದೂರುಗಳಿಗೆ ಇದರಿಂದ ಉತ್ತರ ಸಿಗಲಿದೆ. ಜಂಟಿ ಸರ್ವೆ ಪೂರ್ಣಗೊಂಡ ನಂತರ ಮೀಸಲು ಅರಣ್ಯದಲ್ಲಿಯ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದರು.
ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರವನ್ನು ಆವರಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುವುದನ್ನು ತಡೆಯುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ ಕೆ.ಶೋರ್–ಬ್ಲೂ ಪ್ಯಾಕ್ ಎಂಬ ಐದು ವರ್ಷಗಳ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಮುಂದಿನ ವರ್ಷದಿಂದ ಇದು ಜಾರಿಯಾಗಲಿದೆ ಎಂದು ಹೇಳಿದರು.
ಕುಮಾರ ಪರ್ವತ ಸೇರಿ ರಾಜ್ಯದ ಚಾರಣ ತಾಣಗಳ ಪ್ರವೇಶಕ್ಕೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡುತ್ತೇವೆ. ಅವುಗಳ ಸಾಮರ್ಥ್ಯಕ್ಕೆ ತಕ್ಕಷ್ಟೇ ಜನರಿಗೆ ಅವಕಾಶ ಕಲ್ಪಿಸುತ್ತೇವೆ. ಇದರಿಂದ ಚಾರಣ ತಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಪರಿಸರ ನಾಶ ಹೆಚ್ಚುವುದು ತಪ್ಪುತ್ತದೆ ಎಂದರು.
ಜೀವನ– ಜೀವನೋಪಾಯ ಮತ್ತು ಪರಿಸರ ಉಳಿವು ಈ ಮೂರು ಸಮತೋಲಿತವಾಗಿರುವಂತೆ ನೋಡಿಕೊಂಡು ಅರಣ್ಯ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ.–ಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.