ಬೆಳ್ತಂಗಡಿ: ಮುಂಡಾಜೆ ಮತ್ತು ಕಲ್ಮಂಜ ಗ್ರಾಮದಲ್ಲಿ ಹರಿಯುವ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿರುವ ಕಿಂಡಿ ಅಣೆಕಟ್ಟೆಗಳ ಹಲಗೆ ತೆರವು ಕಾರ್ಯ ಪೂರ್ಣಗೊಳ್ಳದ ಕಾರಣ ಮುಂಡಾಜೆ ಮತ್ತು ಕಲ್ಮಂಜ ಗ್ರಾಮಗಳಲ್ಲಿ ಭಾನುವಾರ ಪ್ರವಾಹ ಭೀತಿ ಉಂಟಾಯಿತು.
ಭಾನುವಾರ ಭಾರಿ ಮಳೆಯಾಗಿದ್ದು, ನೇತ್ರಾವತಿ ಮತ್ತು ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ನದಿಗಳು ತುಂಬಿ ಹರಿದವು. ಇಲ್ಲಿನ ಆನಂಗಳ್ಳಿ, ಪಜಿರಡ್ಕ, ಕಾಪು ಮೊದಲಾದ ಕಡೆಯ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಿಲ್ಲ. ಪಜಿರಡ್ಕ ಕಿಂಡಿ ಅಣೆಕಟ್ಟೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಸಂಗಮ ಸ್ಥಳದಲ್ಲಿದೆ. ಅಣೆಕಟ್ಟೆಯಲ್ಲಿ ಹಲಗೆ ಇದ್ದುದರಿಂದ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ ಎರಡೂ ನದಿಗಳ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಉಂಟಾಯಿತು. ಇದರ ಜತೆ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾದ ಕಸ, ಮರಗಳೂ ನೀರಿನ ಮಟ್ಟ ಏರಿಕೆಗೆ ಕಾರಣವಾಯಿತು.
ಕಾಯರ್ತೋಡಿ, ಕುಡೆಂಚಿ, ಆನಂಗಳ್ಳಿ, ಕಡಂಬಳ್ಳಿ ಮೊದಲಾದ ವಾಳ್ಯಗಳ ತೋಟಗಳಿಗೆ ನದಿ ನೀರು ನುಗ್ಗಿ ಪ್ರವಾಹ ಭೀತಿ ಎದುರಾಯಿತು. ಮಧ್ಯಾಹ್ನ 12 ಗಂಟೆಯಿಂದ ನೀರಿನ ಮಟ್ಟ ಏರಿಕೆಯಾಗಿದ್ದು, ಸಂಜೆ 5ರ ವೇಳೆಗೆ ಕೊಂಚ ಇಳಿಕೆಯಾಗಿದೆ. ಈ ಎರಡೂ ನದಿ ಪಾತ್ರಗಳ ಸಮೀಪ ಹಲವು ಮನೆಗಳಿದ್ದು, ನಿವಾಸಿಗಳು ಭಯಗೊಂಡಿದ್ದಾರೆ.
ಮಳೆಗಾಲ ಆರಂಭಕ್ಕೆ ಮೊದಲೇ ಈ ರೀತಿಯಾಗಿ ನದಿಯಲ್ಲಿ ನೀರು ಹರಿದು ಬಂದಿದ್ದು ಇದೇ ಮೊದಲು. ಕಳೆದ ವರ್ಷ ಈ ಸಮಯ ಎರಡೂ ನದಿಗಳು ಸಂಪೂರ್ಣ ಬತ್ತಿ ನೀರಿಗೆ ಪರದಾಟ ಉಂಟಾಗಿತ್ತು. ಜೂನ್ ಮೂರನೇ ವಾರದ ಬಳಿಕ ನದಿಗಳಲ್ಲಿ ಹರಿವು ಕಂಡುಬಂದಿತ್ತು. ಆದರೆ, ಈ ಬಾರಿ ನದಿಯಲ್ಲಿ ಮೇ ತಿಂಗಳಲ್ಲೇ ಪ್ರವಾಹ ಬಂದಿದೆ ಎಂದು ಮುಂಡಾಜೆ ಕಡಂಬಳ್ಳಿಯ ಕೃಷಿಕ ವಿ.ಜಿ.ಪಟವರ್ಧನ್ ತಿಳಿಸಿದ್ದಾರೆ.
ಕೆಲವು ಕಿಂಡಿ ಅಣೆಕಟ್ಟೆಗಳ ಮೇಲ್ಭಾಗದಿಂದ ನೀರು ಹರಿಯುತ್ತಿದ್ದು ಹಲಗೆ ತೆರವುಗೊಳಿಸಲು ತೊಡಕಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಹಲಗೆ ತೆರವುಗೊಳಿಸಲಾಗುತ್ತದೆ. ಫಲ್ಗುಣಿ ನದಿಗೆ ಬಳಂಜ ಸಂಪರ್ಕಿಸುವ ಕಿರು ಸೇತುವೆಯಲ್ಲಿ ಕಸ, ಮರ ಸಂಗ್ರಹವಾಗಿದ್ದು, ಪಡಂಗಡಿ ಮೂಲಕ ಹಚ್ಚಾಡಿಗೆ ಸಂಪರ್ಕ ಭೀತಿ ಎದುರಾಗಿದೆ.
ತಹಶೀಲ್ದಾರ್ ಭೇಟಿ: ಧರ್ಮಸ್ಥಳ ಸ್ನಾನಘಟ್ಟ, ಪಜಿರಡ್ಕ ಮೊದಲಾದ ಕಡೆಗಳಿಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ನೀರಿಗೆ ಇಳಿಯದಂತೆ ಸೂಚನೆ ನೀಡಿ ಪರಿಸರದ ಜನರಿಗೆ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ನೆರೆ ಸೃಷ್ಟಿಯಾಯಿತು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ವಾಹನ ಸವಾರರು ತೊಂದರೆ ಅನುಭವಿಸಿದರು. ಚರಂಡಿಗಳು ಸಮರ್ಪಕವಾಗಿ ನಿರ್ಮಾಣವಾಗದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಮೀಪದ ಮನೆಗಳ ಕಡೆಗೂ ನೀರು ಹರಿದು ಬಂತು. ಮದ್ದಡ್ಕದಿಂದ ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಬಳಿ ಕಳೆದ ವರ್ಷ ಮಳೆಗಾಲದಲ್ಲಿ ಅಳವಡಿಸಲಾದ ಮೋರಿಯ ಭಾಗದಲ್ಲಿ ಕುಸಿದು ಮತ್ತೆ ಸಂಪರ್ಕ ಕಡಿತ ಭೀತಿ ಎದುರಾಗಿದೆ.
ತಾಲ್ಲೂಕಿನ ಕೆಲವು ಕಡೆ ಕಿಂಡಿ ಅಣೆಕಟ್ಟೆಗಳ ಹಲಗೆ ತೆರವು ಕಾರ್ಯ ಬಾಕಿ ಇದ್ದು, ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಹಲಗೆ ತೆರವು ಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯ ಸಂದರ್ಭಕ್ಕೆ ಇಲಾಖೆಯ ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಪ್ರಸ್ತುತ ಪ್ರವಾಹದ ಭೀತಿ ಇಲ್ಲ. ಆದರೂ ನದಿ ಪಾತ್ರಗಳ ಜನರು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ತಹಶೀಲ್ದಾರ್ ತಿಳಿಸಿದರು.
ಮನೆಗೆ ಹಾನಿ, ಅಡಿಕೆ, ತೆಂಗಿನ ಮರಗಳು ಧರೆಗೆ
ಉಪ್ಪಿನಂಗಡಿ ಸಮೀಪದ ಬೊಲುಂಬುಡ ಎಂಬಲ್ಲಿ ಧನಂಜಯ ಗೌಡ ಎಂಬುವರ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಬೊಳುಂಬುಡ ಪ್ರದೇಶದಲ್ಲಿ ಭಾನುವಾರ ಸಂಜೆ ವೇಳೆ ಸುರಿದ ಭಾರಿ ಗಾಳಿ–ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದು, ಮನೆ ಭಾಗಶಃ ಹಾನಿಗೀಡಾಗಿದೆ. 7 ತೋಟಗಳಲ್ಲಿ ಸುಮಾರು 1,800 ಅಡಿಕೆ ಮರಗಳು, ಸುಮಾರು 20 ತೆಂಗಿನ ಮರಗಳು, 5 ವಿದ್ಯುತ್ ಕಂಬಗಳು ಧರೆಗುರುಳಿವೆ.
ಹಿರೇಬಂಡಾಡಿ ಗ್ರಾಮದ ಬೊಲುಂಬುಡ ಮಜಿಕೂಡೇಲು ನಿವಾಸಿ ರುಕ್ಮಿಣಿ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅವರ ತೋಟದಲ್ಲಿ 600 ಅಡಿಕೆ, 10 ತೆಂಗಿನ ಮರಗಳಿಗೆ ಹಾನಿಯಾಗಿದೆ. ನೀರಿನ ಟ್ಯಾಂಕ್ ಪುಡಿಯಾಗಿದೆ.
ಕೇದಗೆದಡಿ ಪರಿಸರದಲ್ಲಿ ಧನಂಜಯ ಗೌಡ ಎಂಬುವರ ತೋಟದಲ್ಲಿ 500 ಅಡಿಕೆ ಮರ, 5 ತೆಂಗು, 5 ವಿದ್ಯುತ್ ಕಂಬಗಳು ಧರೆಗುರುಳಿವೆ.
ಜನಾರ್ದನ ಗೌಡ ಅವರ ತೋಟದಲ್ಲಿ 450 ಅಡಿಕೆ ಮರ, 4 ತೆಂಗು, ಮನೆಯ ಸಿಮೆಂಟ್ ಶೀಟ್ ಹಾರಿ ಹೋಗಿದೆ. ಚಿದಾನಂದ ಅವರ 35 ಅಡಿಕೆ, 5 ವಿದ್ಯುತ್ ಕಂಬ, ಫಾರೂಕ್ ಎಂಬುವರ 50 ಅಡಿಕೆ ಮರ, ದಿನೇಶ್ ಅವರ 25 ಅಡಿಕೆ ಮರ, ಬರಮೇಲು ಹೊನ್ನಪ್ಪ ಗೌಡ ಅವರ 100 ಅಡಿಕೆ ಮರ, ವಾಸಪ್ಪ ಗೌಡ ಅವರ 75 ಅಡಿಕೆ ಮರಗಳು ಧರೆಗುರುಳಿವೆ. ಈ ಪ್ರದೇಶದಲ್ಲಿ ಸುಮಾರು ₹ 25 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಡಬ: ಕಾರಿನ ಮೇಲೆ ಮರ ಬಿದ್ದು 6 ಮಂದಿಗೆ ಗಾಯ
ಕಡಬ (ಉಪ್ಪಿನಂಗಡಿ): ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಭಾನುವಾರ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು, ಕಾರಿನಲ್ಲಿದ್ದ ಮಗು ಸಹಿತ 6 ಮಂದಿ ಗಾಯಗೊಂಡಿದ್ದು, ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರು ಶಿವಮೊಗ್ಗ ಮೂಲದ ವೆಂಕಟೇಶ್, ಪ್ರವೀಣ, ವೆಂಕಟಮ್ಮ, ಸುಮತಿ ಹಾಗೂ ಇಬ್ಬರು ಮಕ್ಕಳು.
ಅವರು ಕುಕ್ಕೆಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ತೆರಳುವಾಗ ಅವಘಡ ನಡೆದಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯರು ಬಂದು ಯಂತ್ರದ ಮೂಲಕ ಮರ ಕತ್ತರಿಸಿ, ಕಾರಿನಲ್ಲಿದ್ದವರನ್ನು ರಕ್ಷಿಸಿದದರು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.