ADVERTISEMENT

ಬೆಳ್ತಂಗಡಿ: ಭಾರಿ ಮಳೆ, ವಿವಿಧೆಡೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:25 IST
Last Updated 31 ಮೇ 2025, 13:25 IST
ಇಳಂತಿಲ ಗ್ರಾಮದ ಹಾರಕೆರೆ ಬಳಿ ಗುಡ್ಡ ಕುಸಿದು ರಸ್ತೆ ಬಂದ್ ಆಗಿತ್ತು
ಇಳಂತಿಲ ಗ್ರಾಮದ ಹಾರಕೆರೆ ಬಳಿ ಗುಡ್ಡ ಕುಸಿದು ರಸ್ತೆ ಬಂದ್ ಆಗಿತ್ತು   

ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ನಸುಕಿನವರೆಗೆ ಭಾರಿ ಮಳೆಯಾಗಿದ್ದು, ನದಿಗಳು ತುಂಬಿ ಹರಿದವು. ಕೆಲವೆಡೆ ಗುಡ್ಡ ಕುಸಿದು ಹಾನಿಯಾಗಿದೆ.

ತಾಲ್ಲೂಕಿನ ನೇತ್ರಾವತಿ, ಪಲ್ಗುಣಿ, ಸೋಮಾವತಿ, ಮೃತ್ಯುಂಜಯ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಭಾರಿ ಪ್ರಮಾಣದ ನೀರು ಬಂದಿತ್ತು. ಶನಿವಾರ ಇಡೀ ದಿನ ಬಿಸಿಲಿನ ವಾತಾವರಣದಿಂದ ನದಿಗಳ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ.

ಇಳಂತಿಲ ಗ್ರಾಮದ ಹಾರಕೆರೆ ಬಳಿ ಗುಡ್ಡೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕುವೆತಂಡ ಬಳಿ ನದಿ ನೀರು ರಸ್ತೆಯಲ್ಲೇ ಹರಿಯಿತು. ಬನ್ನಂಗಳ ಬಳಿಯ ಸುಲೈಮಾನ್ ಎಂಬುವರ ಮನೆಯ ಪಕ್ಕದ ಗುಡ್ಡ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ. ಗುಡ್ಡ ಮತ್ತಷ್ಟು ಕುಸಿಯುವ ಅಪಾಯ ಇದ್ದು, ಮನೆಯವರನ್ನು ಸ್ಥಳಾಂತರಿಸಲಾಗಿದೆ. ಸಿದ್ದಿಕ್ ಅವರ ಮನೆಯ ಹಿಂದಿನ ಗುಡ್ಡ ಕುಸಿದು ಮನೆಗೆ ನೀರು ನುಗ್ಗಿದೆ. ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.

ADVERTISEMENT

ಬಂದಾರು ಗ್ರಾಮದ ಶಿವನಗರ - ಬೋಲೋಡಿ ಪೆರ್ಲ ಬೈಪಾಡಿ ರಸ್ತೆಯ ಬೋಲೋಡಿ ಬಳಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಬಂದಾರು ಗ್ರಾಮದ ಮುರ್ತಾಜೆ ಸೇಸಪ್ಪ ಪೂಜಾರಿ ಅವರ ಕೋಳಿ ಷೆಡ್ ಬಳಿ ಗುಡ್ಡ ಕುಸಿದು ಹಾನಿಯಾಗಿದೆ. ಮುರ್ತಾಜೆ ಬಳಿ ರಸ್ತೆ ಕುಸಿದು ಸಂಪರ್ಕ ಕಡಿತವಾಗಿದೆ. ಲಾಯಿಲ ಗ್ರಾಮದ ಅಂಕಾಜೆ ಬಳಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬಾರ್ಯ ಗ್ರಾಮದ ಸೋಕಿಲ ಬಳಿ ಗುಡ್ಡ ಕುಸಿದು, ಮರ ಬಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಅಶ್ರಫ್ ನೀರ್ಕಜೆ ಅವರ ವಾಸದ ಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ನಡ ಗ್ರಾಮದ ಸುರ್ಯ ಕುಮೇರು ರಸ್ತೆ ಬದಿಯ ಗುಡ್ಡ ಕುಸಿದಿದೆ. ಗ್ರಾಮದ ನೆಕ್ಕರೆ ಬಳಿ ವಿಶ್ವನಾಥ ಗೌಡರ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಕೊಯಗುಡ್ಡೆಯಿಂದ ಸುರಂಟೆ ಸಂಪರ್ಕಿಸುವ ದಾರಿಯಲ್ಲಿ ಮೋರಿ ಕುಸಿದಿದೆ.

ತೆಕ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳಪಲ್ಕೆ ವಂದಯ ರಸ್ತೆಯ ಮಠಂಥಕೋಡಿ ಬಳಿ ರಸ್ತೆಯ ಎರಡೂ ಬದಿಯ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಡಕಾಗಿದೆ. ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗ್ಗ ಪರಿಶಿಷ್ಟ ಜಾತಿ ಕಾಲೊನಿ ಹಾಗೂ ಕರಾಯ ಕಡ್ತಿಮಾರು ಬಳಿ ಗುಡ್ಡ ಕುಸಿದು ಹಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸವಿರುವ ಕುಟುಂಬದವರಿಗೆ ಕರಾಯ ಪ್ರೌಢಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರ ಅಥವಾ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.

ಬಂದಾರು ಗ್ರಾಮದ ಮುರ್ತಾಜೆ ಬಳಿ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ
ಇಳಂತಿಲ ಗ್ರಾಮದ ಬನ್ನೆಂಗಳ ಸುಲೈಮಾನ್ ಎಂಬುವರ ಮನೆಯ ಪಕ್ಕದ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ
ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗ್ಗ ಪರಿಶಿಷ್ಟ ಜಾತಿ ಕಾಲೊನಿ ಹಾಗೂ ಕರಾಯ ಕಡ್ತಿಮಾರು ಬಳಿ ಗುಡ್ಡ ಕುಸಿದ ಪ್ರದೇಶಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್ ತಹಶೀಲ್ದಾರ್ ಪೃಥ್ವಿ ಸಾನಿಕಂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.