ಮಂಗಳೂರು: ಪ್ರತಿ ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅರ್ಜಿ ವಿಲೇವಾರಿ ವಿಷಯ ಕಾರ್ಯಸೂಚಿಯಾಗಿ ಸೇರ್ಪಡೆಯಾಗಬೇಕು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಣಿ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಇಲಾಖೆಗಳ ಮುಖ್ಯಸ್ಥರು ಮೂರು ತಿಂಗಳಿಗೊಮ್ಮೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಬೇಕು ಎಂದು ತಿಳಿಸಲಾಗಿದೆ. ಜನರಿಂದ ಗುಣಮಟ್ಟದ ಅರ್ಜಿಗಳು ಸಲ್ಲಿಕೆಯಾದಾಗ ಮಾತ್ರ ಕಾಯ್ದೆ ನಿಜ ಅರ್ಥದಲ್ಲಿ ಸದೃಢವಾಗಿರುತ್ತದೆ’ ಎಂದರು.
ಕಳೆದ ಫೆಬ್ರುವರಿಯ ವೇಳೆ ಕರ್ನಾಟಕ ಮಾಹಿತಿ ಆಯೋಗದಲ್ಲಿ 55,400 ಮೇಲ್ಮನವಿಗಳು ವಿಲೇವಾರಿಗೆ ಬಾಕಿ ಇದ್ದವು. ಅವುಗಳಲ್ಲಿ 2015ರವರೆಗೆ ಅರ್ಜಿಗಳೂ ಬಾಕಿ ಇದ್ದವು. ಅ.17ರವರೆಗೆ ಬಾಕಿ ಇರುವ ಅರ್ಜಿ ಸಂಖ್ಯೆ 38,787. ಆಯೋಗಕ್ಕೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರ ನೇಮಕ ಆಗಿದ್ದು, ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 232 ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ರಾಜ್ಯದಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿದೆ ಎಂದರು.
ರಾಜ್ಯದಲ್ಲಿ ಪ್ರತಿವರ್ಷ ಸುಮಾರು 6 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅವುಗಳಲ್ಲಿ ಶೇ 5ರಷ್ಟು ಅರ್ಜಿಗಳಿಗೆ ಮೇಲ್ಮನವಿ ಸಲ್ಲಿಕೆಯಾಗಿ, ಆಯೋಗಕ್ಕೆ ಬರುತ್ತವೆ. ಕಾಯ್ದೆ ಅನುಷ್ಠಾನಗೊಂಡು 20 ವರ್ಷಗಳು ಕಳೆದರೂ, ಅರ್ಜಿ ಸಲ್ಲಿಸುವ ಬಗ್ಗೆ ಜನರಿಗೆ ಇರುವಷ್ಟು ಮಾಹಿತಿಯೂ ಅಧಿಕಾರಿಗಳಿಗೆ ಇಲ್ಲ. ಸಾರ್ವಜನಿಕರ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ನೀಡದೆ ಸತಾಯಿಸಿದರೆ ₹25 ಸಾವಿರದವರೆಗೆ ದಂಡ ವಿಧಿಸುವ, ಶಿಸ್ತುಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.
ಅರ್ಜಿ ಸಲ್ಲಿಸಿದಾಗ ಉತ್ತರ ನೀಡಲು ವಿಷಯ ನಿರ್ವಾಹಕ ವಿಳಂಬ ಮಾಡಿದಲ್ಲಿ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ನಿಯಮದಲ್ಲಿ ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡ 26 ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಪ್ರಕರಣ ಹೈಕೋರ್ಟ್‌ನಲ್ಲಿದೆ.
-ಬದ್ರುದ್ದೀನ್ ಕೆ. ಮಾಣಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.