ಮಲಯಾಳ
ಕಾಸರಗೋಡು: ಮಲಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಗಡಿನಾಡ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯವಾಗಿ ಪರಿಣತರ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ‘ಕರ್ನಾಟಕ ಸಮಿತಿ’ ನೇತೃತ್ವದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಶಿಕ್ಷಣ ಮತ್ತು ವಕೀಲರ ವಲಯಗಳ ಆಯ್ದ ಮಂದಿಯನ್ನು ಸೇರಿಸಿ ಈ ಸಮಿತಿ ರಚಿಸಲಾಗುವುದು. ಮಲಯಾಳಂ ಕಲಿಕೆ ಕಡ್ಡಾಯ ಕಾಯ್ದೆಯಿಂದ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಹೊರಗಿಡುವಂತೆ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಜಿಲ್ಲೆಯಾದ್ಯಂತ ಈ ಸಂಬಂಧ ಶೀಘ್ರವೇ ಪ್ರತಿಭಟನಾ ಸಭೆಗಳನ್ನು ನಡೆಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ‘ಕರ್ನಾಟಕ ಸಮಿತಿ’ ಅಧ್ಯಕ್ಷ ಕೆ.ಮುರಳೀಧರ ಬಳ್ಳುಕ್ಕರಾಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಮುಖರಾದ ತೆಕ್ಕೇಕೆರೆ ಶಂಕರನಾರಾಯಣ ಭಟ್, ಎನ್.ಕೆ. ಮೋಹನದಾಸ್, ಥಾಮಸ್ ಡಿಸೋಜಾ, ಆಯಿಷಾ ಎ.ಎ.ಪೆರ್ಲ, ಡಾ.ರತ್ನಾಕರ ಮಲ್ಲಮೂಲೆ, ಜಯನಾರಾಯಣ ತಾಯನ್ನೂರು, ಸುಕೇಶ ಎ., ಕೆ.ಶಶಿಧರ ಶೆಟ್ಟಿ, ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ, ಎ.ಆರ್.ಸುಬ್ಬಯ್ಯಕಟ್ಟೆ, ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸುಂದರ ಬಾರಡ್ಕ, ಕೆ.ಭಾಸ್ಕರ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಬ್ಬಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.