ADVERTISEMENT

ಕಾಸರಗೋಡು-ಮಂಗಳೂರು ಪ್ರಯಾಣಕ್ಕೆ ಪಾಸ್‌ ಬೇಕಿಲ್ಲ

ಷರತ್ತು ಸಡಿಲಿಸಿದ ಕಾಸರಗೋಡು ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:53 IST
Last Updated 26 ಆಗಸ್ಟ್ 2020, 16:53 IST

ಮಂಗಳೂರು: ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ನಿತ್ಯವೂ ಬಂದು ಹೋಗುವ ಪ್ರಯಾಣಿಕರಿಗೆ ಪಾಸ್‌ ಕಡ್ಡಾಯಗೊಳಿಸಿದ್ದ ಆದೇಶವನ್ನು ಅಲ್ಲಿನ ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಅವರು ಬುಧವಾರ ಹಿಂಪಡೆದಿದ್ದಾರೆ.

ಬುಧವಾರ ನಡೆದ ಕಾಸರಗೋಡು ಜಿಲ್ಲಾ ಕೋವಿಡ್‌ ಕೋರ್‌ ಸಮಿತಿಯ ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಜಿಲ್ಲಾಧಿಕಾರಿ, ‘ಪಾಸ್‌ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ನಿತ್ಯ ಪ್ರಯಾಣಿಸುವವರು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಿ, ‘ನೆಗೆಟಿವ್‌’ ವರದಿಯ ಪ್ರಮಾಣಪತ್ರವನ್ನು ಕೋವಿಡ್‌–19 ‍ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿದರೆ ಸಾಕು’ ಎಂದರು.

ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುವುದು. ನಿತ್ಯ ಮಂಗಳೂರಿಗೆ ಹೋಗಿ, ಬರುವವರ ವಿವರಗಳನ್ನು ಗೂಗಲ್‌ ಸ್ಪ್ರೆಡ್‌ ಶೀಟ್‌ನಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಇತರ ಕಡೆಗಳಲ್ಲೂ ಗಡಿ ತೆರವು: ಪೆರ್ಲ, ಜಾಲ್ಸೂರು, ಮಾಣಿಮೂಲೆ ಮತ್ತು ಪಾಣತ್ತೂರು ಗಡಿ ರಸ್ತೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವುದಕ್ಕೂ ಅನುಮತಿ ನೀಡಲಾಗಿದೆ. ಈ ಮಾರ್ಗಗಳಲ್ಲಿ ಸಂಚರಿಸುವವರೂ ಆ್ಯಂಟಿಜೆನ್‌ ಪರೀಕ್ಷೆ ನಡೆಸಿ, ನೆಗೆಟಿವ್‌ ವರದಿಯ ಪ್ರಮಾಣಪತ್ರವನ್ನು ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಗಡಿ ರಸ್ತೆಗಳಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳು ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಹೇಳಿದರು.

ಪೆರ್ಲ, ಜಾಲ್ಸೂರು, ಮಾಣಿಮೂಲೆ, ಪಾಣತ್ತೂರು ರಸ್ತೆಗಳ ಗಡಿ ಪ್ರದೇಶಗಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನಿವಾಸಿಗಳು ಕಾಸರಗೋಡು ಜಿಲ್ಲೆಗೆ ಪ್ರವೇಶ ಮಾಡುವುದಿದ್ದರೆ ನೋಂದಣಿಯ ಅಗತ್ಯವಿಲ್ಲ. ಆದರೆ, ಆ ವ್ಯಕ್ತಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿಟ್ಟು ಇತರ ಗ್ರಾಮ ಪಂಚಾಯಿತಿಗಳಿಗೆ ಪ್ರವೇಶಿಸಕೂಡದು ಎಂಬುದನ್ನು ಖಚಿತಪಡಿಸುವ ಹೊಣೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ನಿರ್ವಹಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.