ADVERTISEMENT

ಕಾಸರಗೋಡು: 17ರಿಂದ ರಾಷ್ಟ್ರೀಯ ತುಳು ವಿಚಾರ ಸಂಕಿರಣ, ಅವಲೋಕನ ಸಭೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST

ಕಾಸರಗೋಡು: ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ಇದೇ 17 ಮತ್ತು 18ರಂದು ಕಾಸರಗೋಡು ಲಲಿತ ಕಲಾಸದನದಲ್ಲಿ ಜರಗಲಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಅಂತಿಮ ರೂಪುರೇಖೆಗಳ ಸಭೆ ನಡೆಯಿತು. ಸಭೆಯಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ. ಕುಮಾರನ್ ಮಾಸ್ತರ್ ವಿಚಾರ ಸಂಕಿರಣದ ಕಾರ್ಯಸೂಚಿಯ ಬಗ್ಗೆ ಮಾಹಿತಿ ನೀಡಿದರು.

17 ರಂದು ಬೆಳಿಗ್ಗೆ 10.15 ಕ್ಕೆ ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ರಾಜ್ಯ ವಿದ್ಯುತ್ ಖಾತೆಯ ಸಚಿವ ಎಂ.ಎಂ.ಮಣಿ ಉದ್ಘಾಟಿಸುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿರುವರು. ಅಕಾಡೆಮಿಯ ವಿಶೇಷ ಸಂಚಿಕೆ ತೆಂಬರೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸುವರು.

ADVERTISEMENT

ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡುವರು. ‘ಕಾಸರಗೋಡಿನ ತುಳು ಭಾಷೆಯ ಸೊಗಡು’ ಎಂಬ ವಿಷಯದ ಬಗ್ಗೆ ಸಮಗ್ರ ಶಿಕ್ಷಾ ಯೋಜನೆಯ ಜಿಲ್ಲಾ ನಿರೂಪಣಾಧಿಕಾರಿ ನಾರಾಯಣ ದೇಲಂಪಾಡಿ ಹಾಗೂ ಕಾಸರಗೋಡಿನ ತುಳು ಸಾಹಿತ್ಯ ಎಂಬ ವಿಷಯದಲ್ಲಿ ತುಳು ಸಾಹಿತಿ ಡಾ.ಕಿಶೋರ್ ಕುಮಾರ್ ರೈ ಶೇಣಿ ವಿಚಾರ ಮಂಡನೆ ನಡೆಸುವರು. ರಸಪ್ರಶ್ನೆ ಸ್ಪರ್ಧೆ,ಆಟಿ ಕಳಂಜ, ಪ್ರಬಂಧ ಸ್ಪರ್ಧೆ ನಡೆಯಲಿದೆ. ಕಂಗಿಲು ನಲಿಕೆ, ತುಳು ಯಕ್ಷಗಾನ ಭಾಗವತಿಕೆ ಆಯೋಜಿಸಲಾಗಿದೆ.

18 ರಂದು ಬೆಳಿಗ್ಗೆ 9 ರಿಂದ ತುಳು ಲಿಪಿ ಕಲಿಕಾ ಕಾರ್ಯಾಗಾರ, ತುಳು ಸಂಶೋಧನಾ ಸಾಧ್ಯತೆಗಳ ವಿಚಾರ ಸಂಕಿರಣ ನಡೆಯಲಿದೆ. ಮಧ್ಯಾಹ್ನ 2 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮುಖ್ಯ ಅತಿಥಿಗಳಾಗಿರುವರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಸಮಾರೋಪ ಭಾಷಣ ಮಾಡುವರು. ತುಳು ಕವಿತೆ, ಪಾಡ್ದನ, ಜನಪದ ನೃತ್ಯ ಮೊದಲಾದ ಸಾಂಸ್ಕೃತಿಕ ವೈವಿಧ್ಯ ನಡೆಯಲಿವೆ.

ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಳ, ರವೀಂದ್ರನ್ ಪಾಡಿ, ಬಿ.ಕೆ.ಸುಕುಮಾರ್, ಭಾರತಿ ಬಾಬು, ಜಯಂತಿ ಸುವರ್ಣ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಂಕರ ಸ್ವಾಮಿ ಕೃಪಾ, ಬಿ.ಎಂ.ಗಂಗಾಧರ, ರಾಜೀವಿ ಕೆ., ರವೀಂದ್ರ ರೈ ಮಲ್ಲಾವರ, ಎಂ.ಎಂ.ಗಂಗಾಧರನ್, ಸಚಿತ ರೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.