ADVERTISEMENT

ಕಾಸರಗೋಡು: ಮತ್ತೆ 9 ಮಂದಿಯಲ್ಲಿ ಸೋಂಕು

147ಕ್ಕೇರಿದ ಕೋವಿಡ್‌–19 ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 15:11 IST
Last Updated 6 ಏಪ್ರಿಲ್ 2020, 15:11 IST

ಮಂಗಳೂರು: ಕೇರಳದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಇನ್ನೂ ಒಂಭತ್ತು ಮಂದಿಯಲ್ಲಿ ಕೋವಿಡ್‌–19 ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಅಲ್ಲಿ ಸೋಂಕಿತರ ಸಂಖ್ಯೆ 147ಕ್ಕೇರಿದೆ.

‘14 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಸೋಮವಾರ ಲಭಿಸಿದ ವೈದ್ಯಕೀಯ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. ಈ ಪೈಕಿ ಒಂಭತ್ತು ಮಂದಿ ಕಾಸರಗೋಡು ಜಿಲ್ಲೆಯವರು. ಇಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದು, ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಯ ತಲಾ ಒಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ’ ಎಂದು ಕೇರಳ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.

ಮಾರ್ಚ್‌ 16ರಂದು ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಕೋವಿಡ್‌–19 ಪ್ರಕರಣ ದೃಢಪಟ್ಟಿತ್ತು. ಆ ಬಳಿಕ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕೇರಳದಲ್ಲಿ ಒಟ್ಟು 327 ಮಂದಿಯಲ್ಲಿ ಈವರೆಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. 266 ಮಂದಿ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಕಾಸರಗೋಡು ಜಿಲ್ಲೆಯವರೇ ಆಗಿದ್ದಾರೆ.

ADVERTISEMENT

ಕಾಸರಗೋಡು ಜಿಲ್ಲೆಯ ಆರು ವರ್ಷದ ಬಾಲಕನೊಬ್ಬನಲ್ಲಿ ಕೋವಿಡ್‌–19 ಸೋಂಕು ಇರುವುದು ಭಾನುವಾರ ಖಚಿತವಾಗಿತ್ತು. ಆತನನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

221 ಮಂದಿ ಆಸ್ಪತ್ರೆಯಲ್ಲಿ:

ಕಾಸರಗೋಡು ಜಿಲ್ಲೆಯಲ್ಲಿ 10,836 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ 10,615 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. 221 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ, ಐಸೋಲೇಷನ್‌ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಸೋಮವಾರ 16 ಜನರನ್ನು ಐಸೋಲೇಷನ್‌ ವಾರ್ಡ್‌ಗಳಿಗೆ ದಾಖಲು ಮಾಡಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಆಸ್ಪತ್ರೆ ಸಿದ್ಧ:

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿನ ಆಡಳಿತ ವಿಭಾಗದ ಕಟ್ಟಡವನ್ನೇ ಕೋವಿಡ್‌–19 ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. 200 ಹಾಸಿಗೆಗಳ ವಿಶೇಷ ಆಸ್ಪತ್ರೆ ಸೋಮವಾರದಿಂದ ಕಾರ್ಯಾರಂಭ ಮಾಡಿದ್ದು, ಮಂಗಳವಾರದಿಂದ ರೋಗಿಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

ತಿರುವನಂತಪುರದಿಂದ ತಜ್ಞ ವೈದ್ಯರು ಮತ್ತು ನರ್ಸ್‌ಗಳನ್ನು ಒಳಗೊಂಡ 26 ಮಂದಿಯ ವಿಶೇಷ ತಂಡ ಉಕ್ಕಿನಡ್ಕಕ್ಕೆ ಬಂದಿದೆ. ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ಕುರಿತು ಸ್ಥಳೀಯ ವೈದ್ಯರು ಮತ್ತು ನರ್ಸ್‌ಗಳಿಗೆ ವಿಶೇಷ ತಂಡದ ಸದಸ್ಯರು ತರಬೇತಿ ನೀಡಲಿದ್ದಾರೆ.

ವಿಶೇಷ ಆಸ್ಪತ್ರೆ ಆರಂಭಿಸಲು ಕೇರಳ ಸರ್ಕಾರ ಮೊದಲ ಹಂತದಲ್ಲಿ ₹ 7 ಕೋಟಿ ಬಿಡುಗಡೆ ಮಾಡಿದೆ. 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ತೀವ್ರ ನಿಗಾ ಘಟಕವೂ ಕಾರ್ಯಾರಂಭ ಮಾಡಲಿದೆ ಎಂದು ಕೇರಳ ಆರೋಗ್ಯ ಇಲಾಖೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.