ADVERTISEMENT

ಐಸ್‌ಕ್ರೀಂನಲ್ಲಿ ವಿಷ ಬೆರೆಸಿ ಸಹೋದರಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 4:27 IST
Last Updated 14 ಆಗಸ್ಟ್ 2020, 4:27 IST

ಮಂಗಳೂರು: ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಠಾಣಾ ವ್ಯಾಪ್ತಿಯ ಬಳಾಲ್‌ನಲ್ಲಿ ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಸಹೋದರಿಯನ್ನು ಸಹೋದರನೇ ಕೊಲೆ ಮಾಡಿದ್ದು, ತಂದೆ ಮತ್ತು ತಾಯಿಯ ಕೊಲೆಗೂ ಯತ್ನಿಸಿದ್ದಾನೆ. ಈ ಪೈಕಿ ತಂದೆಯ ಸ್ಥಿತಿ ಗಂಭೀರವಾಗಿದೆ.

ಬಳಾಲ್ ಅರಿಂಗಲ್‌ನ ಬೆನ್ನಿ-ಬೆಸ್ಸಿ ದಂಪತಿ ಪುತ್ರಿ ಆನ್ ಮೇರಿ (16) ಕೊಲೆಗೀಡಾದವಳು. ಕೃತ್ಯಕ್ಕೆ ಸಂಬಂಧಪಟ್ಟಂತೆ ಆಕೆಯ ಸಹೋದರ, ಆರೋಪಿ ಅಲ್ಬಿನ್ ಬೆನ್ನಿ (22)ಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಬೆನ್ನಿ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವಾರಗಳ ಹಿಂದೆ ಘಟನೆ ನಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮೇರಿ ಇದೇ 5 ರಂದು ಮೃತಪಟ್ಟಿದ್ದಳು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮೇರಿ ಸಾವು ವಿಷದಿಂದ ಆಗಿರುವುದು ದೃಢವಾಗಿತ್ತು. ಪೊಲೀಸರಿಗೆ ಆಲ್ಬಿನ್ ಬಗ್ಗೆ ಸಂಶಯ ಬಂದಿತ್ತು. ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್‌ನಲ್ಲಿ ಪತ್ತೆಯಾಗಿರಲಿಲ್ಲ. ಇದರಿಂದ ಆಲ್ಬಿನ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.

ADVERTISEMENT

ಐಸ್ ಕ್ರೀಂನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಈತನ ಪ್ರೇಮ ಹಾಗೂ ಅಕ್ರಮ ವ್ಯವಹಾರಕ್ಕೆ ಮನೆಯವರು ಅಡ್ಡಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಈತ ಮನೆಯವರನ್ನು ಕೊಲೆ ಮಾಡಲು ತೀರ್ಮಾನಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.