ಕಾಸರಗೋಡು: ಈ ಬಾರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಮಣ್ಣು ಕುಸಿತದ ದುರಂತವೂ ಹೆಚ್ಚಾಗಿದೆ.
ಚೆರ್ಕಳ ಬಳಿಯ ಬೇವಿಂಜೆ, ಚೆರುವತ್ತೂರಿನ ವೀರಮಲೆ ಗುಡ್ಡದಿಂದ ಮಣ್ಣು, ಕಲ್ಲು ಕುಸಿದು ಪ್ರಮುಖ ರಸ್ತೆ ಮೇಲೆ ಬಿದ್ದು, ಸಂಪರ್ಕ ಕಡಿತಗೊಂಡಿದೆ. ಮಳೆಗಾಲ ಆರಂಭದ ಮುನ್ನ ಮೇ ತಿಂಗಳ ಕೊನೆಯಲ್ಲಿ ಸುರಿದ ಮಳೆಯ ಬಿರುಸಿಗೆ ಆರಂಭಗೊಂಡಿರುವ ಮಣ್ಣು ಕುಸಿತದ ಘಟನೆ ಇನ್ನೂ ನಿಂತಿಲ್ಲ. ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ.
ವೀರಮಲೆ ಗುಡ್ಡದಿಂದ ಇನ್ನೂ ಮಣ್ಣು ಕುಸಿಯುವ ಭೀತಿ ಇದ್ದು, ಈಗಾಗಲೇ ಇಲ್ಲಿನ 29 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅವರು ಮನೆಗೆ ಮರಳುವ ದಿನದ ಬಗ್ಗೆ ಖಚಿತತೆಯೇ ಇಲ್ಲದಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಇರುವ ವೀರಮಲೆ ಗುಡ್ಡದಿಂದ ಕುಸಿದ ಮಣ್ಣನ್ನು ಹಲವು ಬಾರಿ ಜೆಸಿಬಿ ಬಳಸಿ ತೆರವುಗೊಳಿಸಿದರೂ, ಮತ್ತೆ ಮತ್ತೆ ಕುಸಿಯುತ್ತಿದೆ.
ಪ್ರಮುಖ ರಸ್ತೆಯಲ್ಲೇ ಸಂಚಾರ ಸ್ಥಗಿತಗೊಂಡಿರುವುದರಿಂದ ವಾಹನಗಳು ಸುತ್ತು ಬಳಸಿ ಸಾಗಬೇಕಾದ ಸ್ಥಿತಿಯಿದೆ. ಕಾಞಂಗಾಡಿನಿಂದ ಚೆರುವತ್ತೂರು ಮೂಲಕ ಪಯ್ಯನ್ನೂರಿಗೆ ತೆರಳುವ ರಸ್ತೆಯಲ್ಲಿ ಈ ದುರಂತ ನಡೆಯುತ್ತಿದೆ. ಈಗ ವಾಹನಗಳು ನೀಲೇಶ್ವರದಿಂದ ಕೋಟಪ್ಪುರಂ-ಮಡಕ್ಕರ ರಸ್ತೆಯಾಗಿ ಚೆರುವತ್ತೂರಿಗೆ ತೆರಳಬೇಕಿದೆ. ಪಯ್ಯನ್ನೂರಿನಿಂದ ನೀಲೇಶ್ವರಕ್ಕೆ- ಕಾಞಂಗಾಡಿಗೆ ಬರಬೇಕಿರುವ ವಾಹನಗಳು ಕೊತ್ತಾಯಿಮೂಕ್-ಕಾಂಕೋಲು-ಚೀಮೇನಿ-ಕಯ್ಯೂರು-ಚಾಯೋತ್ ಮೂಲಕ ನೀಲೇಶ್ವರ ರಾಷ್ಟ್ರೀಯ ಹೆದ್ದಾರಿಗೆ ತಲಪಬೇಕಿದೆ. ಕರಿವೆಳ್ಳೂರು-ಪಾಲಕುನ್ನು-ವೆಳ್ಳಚ್ಚಾಲ್-ಚೆಂಬ್ರಕ್ಕಾನ-ಕಯ್ಯೂರು-ಚಾಯೋತ್ ರಸ್ತೆ ಮೂಲಕವೂ ನೀಲೇಶ್ವರಕ್ಕೆ ತಲಪಬಹುದು.
ವೀರಮಲೆ ಗುಡ್ಡ ಅಪೂರ್ವ ಔಷಧೀಯ ಸಸ್ಯಗಳ ಆಗರವಾಗಿದ್ದು, ಅಪರೂಪದ ಔಷಧಿ ಗಿಡಗಳಿಗೆ ಪ್ರಸಿದ್ಧವಾಗಿದೆ. ಆದರೆ, ಈಗ ಏಕಾಏಕಿ ಅಲ್ಲಿಂದ ಮಣ್ಣು ಕುಸಿಯುತ್ತಿರುವುದು ಸಸ್ಯಗಳಿಗೂ ಮಾರಕವಾಗುವ ಭೀತಿ ಕಂಡುಬರುತ್ತಿದೆ ಎಂದು ಸ್ಥಳೀಯ ಪರಿಸರ ಪರಿಣತ ಉಣ್ಣಿಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನೊಂದೆಡೆ ವೀರಮಲೆ ಗುಡ್ಡದ ಇನ್ನೊಂದು ಭಾಗದಲ್ಲಿ 8 ಕುಟುಂಬಗಳು ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಮನೆ ಮೇಲೆ ಗುಡ್ಡದ ಮಣ್ಣು ಕುಸಿಯುವ ಭೀತಿ ಅವರಲ್ಲಿದೆ. ಅಧಿಕಾರಿಗಳು ಬಂದು ನಿಮ್ಮ ಸಂಬಂಧಿಕರ ಮನೆಗಳಿಗೆ ತೆರಳಿ ಎಂದು ಹೇಳಿದ್ದಾರೆ. ಆದರೆ, ನಮ್ಮ ಸಂಬಂಧಿಕರು ಯಾರೂ ಸಮೀಪದಲ್ಲಿ ಇಲ್ಲ. ಬಡವರಾದ ನಮಗೆ ಅಲ್ಲಿಗೆ ತೆರಳುವುದು ಸುಲಭದ ಮಾತಲ್ಲ ಎಂದು ಸ್ಥಳೀಯ ನಿವಾಸಿ ನಾರಾಯಣಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.