ADVERTISEMENT

ಅಗೆದು ಹಾಕಿರುವ ಹೆದ್ದಾರಿ ಸಮಸ್ಯೆ: ಕಾಶಿಬೆಟ್ಟು ಉದ್ಯಮಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:38 IST
Last Updated 9 ಆಗಸ್ಟ್ 2024, 15:38 IST
ಕಾಶಿಬೆಟ್ಟುವಿನ ಕೈಗಾರಿಕಾ ‍ಪ್ರದೇಶದ ಮುಂಭಾಗ ಉದ್ಯಮಿಗಳು ಪ್ರತಿಭಟನೆ ನಡೆಸಿದರು
ಕಾಶಿಬೆಟ್ಟುವಿನ ಕೈಗಾರಿಕಾ ‍ಪ್ರದೇಶದ ಮುಂಭಾಗ ಉದ್ಯಮಿಗಳು ಪ್ರತಿಭಟನೆ ನಡೆಸಿದರು   

ಬೆಳ್ತಂಗಡಿ: ಒಂದು ವರ್ಷದಿಂದ ಹೆದ್ದಾರಿ ಕಾಮಗಾರಿಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ. ನಾಲ್ಕು ತಿಂಗಳಿನಿಂದ ಇಲ್ಲಿಯ ಯಾವುದೇ ಕೈಗಾರಿಕೆಯಲ್ಲೂ ಕೆಲಸ‌ಮಾಡಲು ಸಾಧ್ಯವಾಗುತ್ತಿಲ್ಲ. ನಮಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಬೇಡಿ ಎಂದು ಲಾಯಿಲ ಕೈಗಾರಿಕಾ ಪ್ರದೇಶ ಉಳಿಸಿ ಸಮಿತಿಯ ಸಂಚಾಲಕ ಪ್ರಶಾಂತ್ ಹೇಳಿದರು.

ಲಾಯಿಲ ಕಾಶಿಬೆಟ್ಟುವಿನಲ್ಲಿ ಕೈಗಾರಿಕಾ ಪ್ರದೇಶದ ಮುಂಭಾಗ ಅಗೆದು ಹಾಕಿರುವ ಹೆದ್ದಾರಿ ಬದಿಯಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ಕೈಗಾರಿಕಾ ಪ್ರದೇಶ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅದನ್ನು ಸರಿಪಡಿಸಿಕೊಡುವಂತೆ ಹಾಗೂ ಮಳೆಗೆ ಕೆಸರು ನೀರು ನುಗ್ಗದಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತಿದ್ದೇವೆ. ಆದರೆ, ಶಾಸಕ, ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಸರ್ಕಾರದ ಅಧಿಕಾರಿಗಳ ಗಮನ ಸೆಳೆಯಲು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇನ್ನು ವ್ಯವಸ್ಥೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಬೇಕಾಗಬಹುದು’ ಎಂದರು.

ADVERTISEMENT

‌ಉದ್ಯಮಿ ವೆಂಕಟ್ರಮಣ ಭಟ್, ಮುಷ್ತಾಕ್ ಅಹಮ್ಮದ್, ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.

ತಾತ್ಕಾಲಿಕವಾಗಿ ಕೈಗಾರಿಕಾ ಪ್ರದೇಶದ ಒಳಗಿರುವ ಚರಂಡಿ ಸರಿಪಡಿಸಲು ಲಾಯಿಲ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಪ್ರಮುಖ ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.