ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಭೌತಿಕ ಸರ್ವೆ ನಡೆಸಿದಾಗ ಮಾತ್ರ ವಾಸ್ತವ ಸ್ಥಿತಿ ತಿಳಿಯಲಿದೆ. ಆದರೆ, ಕೇರಳ ಹೊರತುಪಡಿಸಿ ಇತರ ಯಾವುದೇ ರಾಜ್ಯಗಳು ಭೌತಿಕ ಸರ್ವೆ ವರದಿ ನೀಡಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಡಬ ತಾಲ್ಲೂಕಿನ ಕೇರ್ಪಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೌತಿಕ ಸಮೀಕ್ಷೆ ಮಾಡಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ, ವೈಮಾನಿಕ ಸಮೀಕ್ಷೆ ಮೂಲಕ ವರದಿ ತಯಾರಿಸಲಾಗಿದೆ. ಇದು ತಪ್ಪು ಎಂಬುದನ್ನು ನಾವು ಹಿಂದೆಯೇ ತಿಳಿಸಿದ್ದೆವು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ತಿಳಿಸಿದ್ದೆವು. ಕರ್ನಾಟಕದಲ್ಲಿ ಇದುವರೆಗೂ ಸಮೀಕ್ಷೆ ನಡೆಸಿಲ್ಲ’ ಎಂದರು.
‘ರೆಡ್ ಝೋನ್ ಇಂಡಸ್ಟ್ರೀಸ್ ಹೊರತು ಪಡಿಸಿ ಇತರ ರೈತರಿಗೆ ಆತಂಕ ಇಲ್ಲ. ಕಸ್ತೂರಿ ರಂಗನ್ ವರದಿ ಸಹಜವಾಗಿ ನಮಗೆ ಆತಂಕ ತರುವಂಥದ್ದೇ. ನಮ್ಮ ರೈತರಿಗೆ ತೊಂದರೆ ನೀಡಬಾರದು. ಯಥಾ ಸ್ಥಿತಿ ವರದಿಯನ್ನು ರಾಜ್ಯ ಸರಕಾರಗಳು ನೀಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ರೈತರ ಪರವಾಗಿ ನಿಂತಿದೆ. ಸರ್ವೆ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.