ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಬಯಲಾಟ ಮೇಳದ ಮುಂದಿನ ವರ್ಷದ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲಾಗುವುದು ಎಂದು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.
ಕಟೀಲು ದೇವಳದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಸ್ತುತ ವರ್ಷದ ಯಕ್ಷಗಾನ ತಿರುಗಾಟದ ಕೊನೆಯ ದಿನವಾದ ಭಾನುವಾರ ಪತ್ತನಾಜೆಯ ಶುಭದಿನ ದೇವಿಯ ಸನ್ನಿಧಾನದಲ್ಲಿ ಹೂವಿನ ಪ್ರಸಾದದ ಮೂಲಕ ದೇವರ ಅಪ್ಪಣೆ ಪಡೆದು ಮೇಳವನ್ನು ಆರಂಭಿಸಲು ತಯಾರಿ ನಡೆಸಲಾಗಿದೆ ಎಂದರು.
ಇತ್ತೀಚಿನ ದಿನದಲ್ಲಿ ಯಕ್ಷಗಾನ ಸೇವೆಯು ಹೆಚ್ಚಾಗುತ್ತಿದ್ದು, ಈ ಬಾರಿ ಹೊಸದಾಗಿ 844 ಯಕ್ಷಗಾನ ಸೇವೆ ಆಟಗಳು ನಿಗದಿಯಾಗಿವೆ. ಪ್ರತಿ ವರ್ಷ 450 ಕಾಯಂ ಆಟ ನಡೆಸುವುದರೊಂದಿಗೆ ತತ್ಕಾಲ ಯೋಜನೆಯಲ್ಲಿ ಪ್ರಸ್ತುತ ವರ್ಷದಲ್ಲಿ 240 ಯಕ್ಷಗಾನ ಆಟ ನಡೆದಿದೆ. ಹೀಗೆ ಪ್ರತಿ ವರ್ಷ ಸುಮಾರು 200ರಿಂದ 300 ಯಕ್ಷಗಾನ ಸೇವೆ ಆಟ ಉಳಿಯುತ್ತಿದ್ದು, ಈಗಾಗಲೇ ಏಳು ಸಾವಿರದಷ್ಟು ಸೇವೆ ಆಟ ಉಳಿದಿದೆ. ಇದನ್ನು ಮನಗಂಡು ಆಡಳಿತ ಮಂಡಳಿಯ ತೀರ್ಮಾನದ ಜೊತೆಗೆ ದೇವಿಯ ಅಪ್ಪಣೆಯಂತೆ ಮೇಳವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಮೇಳಕ್ಕೆ ಎಲ್ಲ ಪರಿಕರಗಳು ಈಗಾಗಲೇ ದಾನಿಗಳ ಮೂಲಕ ಸಲ್ಲಿಕೆಯಾಗಿವೆ. ಹೊಸ ಕಲಾವಿದರೊಂದಿಗೆ ಅನುಭವಿ ಕಲಾವಿದರ ಸೇರ್ಪಡೆ ಆಗಲಿದೆ. ಅಂತಿಮ ಪಟ್ಟಿಯನ್ನು ನವೆಂಬರ್ 16ರಂದು ಮೇಳ ಹೊರಡುವ ಸಮಯದಲ್ಲಿ ತಿಳಿಸಲಾಗುವುದು. ಹವ್ಯಾಸಿ ಕಲಾವಿದರೊಂದಿಗೆ ಮೇಳದ ಕಾಯಂ ಕಲಾವಿದರು 7 ಮೇಳಗಳ ತಿರುಗಾಟದಲ್ಲಿ ಭಾಗವಹಿಸಲಿದ್ದಾರೆ. ಕಲಾವಿದರಿಗೆ ಹಿಂದಿನಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೇವೆ ಆಟದ ಒತ್ತಡ ನಿಯಂತ್ರಿಸಲು ಏಳನೇ ಮೇಳವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ದೇವಳದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಬಿಪಿನ್ ಶೆಟ್ಟಿ, ಪ್ರವೀಣ್ ದಾಸ್ ಭಂಡಾರಿ, ಗಣೇಶ್ ಶೆಟ್ಟಿ ಐಕಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.