ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಳದಿಂದ ಶಿಕ್ಷಣಕ್ಕಾಗಿ ವಾರ್ಷಿಕ ₹10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲು ಸಮೂಹ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ‘ನಮ್ಮೆಲ್ಲರ ಶಾಲೆ’ ಸಂಘಟನೆಯ ವತಿಯಿಂದ ಪದವಿ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಟೀಲು ದೇಗುಲಕ್ಕೆ ವಾರ್ಷಿಕ ₹ 36 ಕೋಟಿ ಆದಾಯ ಇದ್ದು, ಅದರಲ್ಲಿ ಆರು ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನಕ್ಕಾಗಿಯೇ ₹ 10 ಕೋಟಿ ವೆಚ್ಚ ಮಾಡಲಾಗುತ್ತಿದೆ. ದಾನಿಗಳಿಂದ, ಉದ್ಯಮ ಸಂಸ್ಥೆಗಳಿಂದ ಕನ್ನಡ ಮಾಧ್ಯಮದ ಪ್ರಾಥಮಿಕ ವಿಭಾಗದಿಂದ ಪ್ರೌಢಶಾಲೆವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರಗಳನ್ನೂ ನೀಡಲಾಗುತ್ತಿದೆ ಎಂದರು.
ಸಂಸ್ಕೃತದಲ್ಲಿ ಎಂಎ, ಪಿಎಚ್‌ಡಿಗೆ ಕಟೀಲು ಶಿಕ್ಷಣ ಸಂಸ್ಥೆಯೇ ಪ್ರಮುಖ ಕೇಂದ್ರವಾಗಿದೆ. ಸರ್ಕಾರದ ವಿಶ್ವವಿದ್ಯಾನಿಲಯಗಳ ನಿಯಮಗಳಿಂದ ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಸಮಸ್ಯೆಗಳಾಗುತ್ತಿವೆ. ಕನ್ನಡ ಮಾಧ್ಯಮದ ಶಿಕ್ಷಕರಿಗೆ ಸರ್ಕಾರದ ಅನುದಾನ ನೀಡುತ್ತಿಲ್ಲ. ಉದ್ಯೋಗ ಅವಕಾಶಗಳಿಗಾಗಿ ಮತ್ತು ನಗರದ ಆಕರ್ಷಣೆ ಕಾರಣಗಳಿಂದ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂಥ ಸವಾಲುಗಳ ಮಧ್ಯೆ ಕೌಶಾಲಾಭಿವೃದ್ಧಿ ಶಿಕ್ಷಣ ನೀಡುವ ಬಗ್ಗೆ ದೇವಸ್ಥಾನ ಆಸಕ್ತಿ ಹೊಂದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ಕಟೀಲು ಕ್ಷೇತ್ರದ ಭಕ್ತರಾಗಿರುವ ಉದ್ಯಮಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಮ್ಮೆಲ್ಲರ ಶಾಲೆ ಸಂಘಟನೆಯ ಪ್ರಕಾಶ್ ಕುಕ್ಯಾನ್, ಕಿರಣ್ ಶೆಟ್ಟಿ, ವೃಂದಾ ಹೆಗ್ಡೆ, ಯಶ್‌ರಾಜ್ ಮಾತನಾಡಿದರು.
ಉಪನ್ಯಾಸಕ ಪ್ರದೀಪ್ ಡಿ.ಎಂ., ಹಿರಿಯ ವಿದ್ಯಾರ್ಥಿಗಳಾದ ಚಂದ್ರಶೇಖರ್, ಸಂದೇಶ್, ಪ್ರೇಮ್‌ರಾಜ್ ಶೆಟ್ಟಿ, ಗುರುರಾಜ ಕರ್ಕೇರ, ಕಾಲೇಜಿನ ಪ್ರಾಚಾರ್ಯ ವಿಜಯ್ ವಿ. ಭಾಗವಹಿಸಿದ್ದರು. ಉಪನ್ಯಾಸಕಿ ಪೂಜಾ ಕಾಂಚನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.