ADVERTISEMENT

ಕಟೀಲು ದುರ್ಗಪರಮೇಶ್ವರಿ ದೇವಸ್ಥಾನ: ಸಹಸ್ರಾರು ಭಕ್ತರಿಂದ ದೇವಿಯ ದರ್ಶನ

ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:17 IST
Last Updated 22 ಜನವರಿ 2020, 16:17 IST
ಕಟೀಲು ದುರ್ಗಪರಮೇಶ್ವರಿ ದೇವಸ್ಥಾನದ ಉಗ್ರಾಹದಲ್ಲಿ ನಿರ್ಮಿಸುವ ಗರ್ಭಗುಡಿಯ ಮಾದರಿ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಕಟೀಲು ದುರ್ಗಪರಮೇಶ್ವರಿ ದೇವಸ್ಥಾನದ ಉಗ್ರಾಹದಲ್ಲಿ ನಿರ್ಮಿಸುವ ಗರ್ಭಗುಡಿಯ ಮಾದರಿ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಬುಧವಾರದಿಂದ ಆರಂಭವಾಗಿದ್ದು, ಫೆಬ್ರುವರಿ 3 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹೂವುಗಳು, ಛತ್ರ–ಚಾಮರಗಳಿಂದ ಅಲಂಕೃತ ವಾಗಿರುವ ಕಟೀಲು ದೇವಸ್ಥಾನಕ್ಕೆ ಬುಧವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ಕಾರ್ಯಕ್ರಮದ ಅಂಗವಾಗಿ ತೋರಣ ಮುಹೂರ್ತ, ಪುಣ್ಯಾಹವಾಚನ, ಋತ್ವಿಗ್‌ವರಾನ, ಅರಣಿಮಥಾನ, ಬ್ರಹ್ಮಕೂರ್ಚ ಹೋಮ, ಕಂಕಣ ಬಂಧ, ಪುರಾಣ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಗ್ರಾಣ ಮುಹೂರ್ತ ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್, ‘ದೇವಾಲಯದ ಚಿನ್ನ ಲೇಪಿತ ಧ್ವಜಸ್ತಂಭವನ್ನು ಇದೇ 24 ರಂದು ಧ್ವಜ ಕಲಶಾಭಿಷೇಕ, ಭಾಗ್ಯಕಮಾರ್ತ್ಯ ಹೋಮ, ಲಕ್ಷ್ಮಿಸಹಸ್ರನಾಮ ಮುಂತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸ್ಥಾಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ಇದೇ 30 ರಂದು ಬೆಳಿಗ್ಗೆ 9.37 ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಅವಸ್ರುತಬಾಲಿ, ಪಲ್ಲಪೂಜೆ ಮತ್ತು ಇತರ ಆಚರಣೆಗಳು ನಡೆಯಲಿವೆ. ಬ್ರಹ್ಮಕಲಾಶಾಭಿಷೇಕದ ಒಂದು ಭಾಗವಾಗಿ ಶನಿಯಾಗ, ಸಪ್ತಶತಿಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನವನ್ನು ಸ್ಥಾಪಿಸಲಾಗುವುದು. ಸಂಜೆ 5 ಕ್ಕೆ ಮಹಾರಾಥೋತ್ಸವ ಜರುಗಲಿದೆ ಎಂದು ತಿಳಿಸಿದರು.

ಫೆಬ್ರುವರಿ 1 ರಂದು ನಾಗಮಂಡಲೋತ್ಸವ, 2 ರಂದು ಕೋಟಿಜಪಯಜ್ಞ ಮತ್ತು 3ರಂದು ಸಹಸ್ರಚಂಡಿಕಾಯಾಗ ನಡೆಯಲಿವೆ. 11 ಹೋಮ ಕುಂಡಗಳಲ್ಲಿ 200 ಅರ್ಚಕರು ಹೋಮ ನೆರವೇರಿಸಲಿದ್ದಾರೆ. 13 ದಿನಗಳ ಕಾಲ ಬ್ರಹ್ಮಕಲಶೋತ್ಸವ ಸಂಭ್ರಮಾಚರಣೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

1.5 ಲಕ್ಷ ಚದರ ಅಡಿ ವಿಸ್ತೀರ್ಣದ ಊಟದ ಮನೆ ನಿರ್ಮಾಣ ಮಾಡಲಾಗಿದೆ. 700 ಭಜನಾ ತಂಡಗಳು ನೋಂದಣಿ ಮಾಡಿಕೊಂಡಿವೆ. ವಾಹನಗಳ ನಿಲುಗಡೆಗೆ 19 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.