ADVERTISEMENT

ಕಾವೇರಿ ತಂತ್ರಾಂಶ 2.0 ಜಾರಿಗೆ ಮುನ್ನ ಲೋಪ ಸರಿಪಡಿಸಿ

ಮಂಗಳೂರು ವಕೀಲರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 10:26 IST
Last Updated 8 ಫೆಬ್ರುವರಿ 2023, 10:26 IST
   

ಮಂಗಳೂರು: ಮಂಗಳೂರು ತಾಲ್ಲೂಕಿನ ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಜಮೀನು ಮತ್ತು ಆಸ್ತಿ ದಾಖಲೆಗಳ ನೋಂದಣಿಗಾಗಿ ಕಾವೇರಿ 2.0 ತಂತ್ರಾಂಶ ಅಳವಡಿಕೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮುಂದಾಗಿದೆ. ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲೂ ಇದೇ 13ರಿಂದ ಪ್ರಾಯೋಗಿಕವಾಗಿ ಇದನ್ನು ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲವು ಲೋಪಗಳಿದ್ದು, ಈ ಪ್ರಕ್ರಿಯೆಯನ್ನು ಮಂದೂಡಬೇಕು ಎಂದು ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ‘ಹೊಸ ತಂತ್ರಾಂಶ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಇದರಿಂದ ಜನರಿಗೆ ಸಮಸ್ಯೆ ಉಂಟಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಮೇಲ್ನೋಟಕ್ಕೆ ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಿ ನಂತರ ಹೊಸ ವ್ಯವಸ್ಥೆ ಜಾರಿಯಾಗಲಿ. ಈ ಪರಿವರ್ತನೆ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಪ್ರಾತ್ಯಕ್ಷಿಕೆ ನಡೆಸಿ ಇದರ ಪ್ರಯೋಜನಗಳ ಅರಿವು ಮೂಡಿಸಲಿ’ ಎಂದರು.

‘ಆಸ್ತಿ ನೋಂದಣಿ ಸಂದರ್ಭ ಶೀರ್ಷಿಕೆಯ ಪರಿಶೀಲನೆ, ಪರಿಗಣನೆಯ ಪಾವತಿ, ನೋಂದಣಿ ಶುಲ್ಕ ಪಾವತಿ, ಮುದ್ರಾಂಕ ಶುಲ್ಕ ಪಾವತಿ, ಸಂಬಂಧಪಟ್ಟವರ ಸಹಿ ಮೊದಲಾದ ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಆದರೆ, ಹೊಸ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯದು. ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಪ್ರಾತ್ಯಕ್ಷಿಕೆ ವೇಳೆ ಬೆಂಗಳೂರಿನಲ್ಲಿ ಕುಳಿತ ಮಹಿಳೆಯೊಬ್ಬರು ಅಸ್ಪಷ್ಟ ಉತ್ತರ ನೀಡಿದ್ದರು’ ಎಂದು ಅವರು ದೂರಿದರು.
‘ಕಾವೇರಿ 2.0 ಜಾರಿಗೊಂಡರೆ, ಅದಕ್ಕೆ ಹೊಂದಿಕೊಳ್ಳುವುದಕ್ಕೆ ಜನರಿಗೆ ಕಷ್ಟವಾಗಲಿದೆ. ಈಗಿರುವ ಕಾವೇರಿ 1.0 ವ್ಯವಸ್ಥೆಯಲ್ಲೇ ಪಾವತಿಸಿದ ಹಣ ಹಿಂದಕ್ಕೆ ಪಡೆಯಲು ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಆನ್‌ಲೈನ್‌ನಲ್ಲಿ ತಪ್ಪಾಗಿ ಪಾವತಿಸಿದ ಮೊತ್ತದ ಮರುಪಾವತಿ ವಿಧಾನವೂ ಸ್ಪಷ್ಟವಾಗಿಲ್ಲ’ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಈಶ್ವರ್ ಕೊಟ್ಟಾರಿ, ವಿಕ್ರಮ್‌ ಪಡುವೆಟ್ನಾಯ ಸುದ್ದಿಗೋಷ್ಠಿಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.