ADVERTISEMENT

ಮಂಗಳೂರು | ಚರಕದಿಂದ ಕೈಮಗ್ಗದ ವರೆಗೆ ಪ್ರಾತ್ಯಕ್ಷಿಕೆ

ರೈತ ಕುಡ್ಲ ಪ್ರತಿಷ್ಠಾನ, ಗ್ಲೋಬಲ್ ಇಕೊ ಗ್ರೀನ್ ಫೌಂಡೇಷನ್‌ನ ರೈತ ಮೇಳ, ಸಸ್ಯೋತ್ಸವದಲ್ಲಿ ವಸ್ತು ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:02 IST
Last Updated 18 ಅಕ್ಟೋಬರ್ 2025, 6:02 IST
ಗುಡ್ಡವನ್ನು ಕೊರೆದು ಸುರಂಗ ಮಾಡಿದ ಜಾನ್ ಮೊಂತೆರೊ ಅವರಿಗೆ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು 
ಗುಡ್ಡವನ್ನು ಕೊರೆದು ಸುರಂಗ ಮಾಡಿದ ಜಾನ್ ಮೊಂತೆರೊ ಅವರಿಗೆ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು    

ಮಂಗಳೂರು: ಕೈಮಗ್ಗ, ಅದರ ಪಕ್ಕದಲ್ಲೇ ಸೈಕಲ್‌ನ ರಿಮ್‌ಗೆ ಅಳವಡಿಸಿರುವ ಚರಕ, ಮಣ್ಣಿನ ಮಡಕೆ ತಯಾರಿಸುವ ಪ್ರಾತ್ಯಕ್ಷಿಕೆ. ಅದರ ಆಚೆ ಬುಟ್ಟಿ ನೇಯುವ ‘ಕಲೆ’ಯ ಪ್ರದರ್ಶನ, ಸುತ್ತಮುತ್ತ ಖಾದಿ ಉತ್ಪನ್ನಗಳು, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳು. ನಗರದ ಕದ್ರಿ ಉದ್ಯಾನದಲ್ಲಿ ನಡೆಯುತ್ತಿರುವ ಸಸ್ಯೋತ್ಸವ ಮತ್ತು ರೈತ ಮೇಳದಲ್ಲಿ ಇವೆಲ್ಲವೂ ಗಮನ ಸೆಳೆಯುತ್ತಿವೆ.

ರೈತ ಕುಡ್ಲ ಪ್ರತಿಷ್ಠಾನ ಮತ್ತು ಗ್ಲೋಬಲ್ ಇಕೊ ಗ್ರೀನ್ ಫೌಂಡೇಷನ್ ಆಯೋಜಿಸಿರುವ ಮೂರು ದಿನಗಳ ಮೇಳದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತಿತರ ಕಡೆಗಳಿಂದ ಬಂದಿರುವ ಕುಶಲಕರ್ಮಿಗಳು ಮತ್ತು ಸಾವಯವ, ನೈಸರ್ಗಿಕ ಕೃಷಿ ಉತ್ಪನ್ನಗಳ ಮಾರಾಟಗಾರರ ಮಳಿಗೆಗಳು ವಸ್ತು ವೈವಿಧ್ಯಕ್ಕೆ ವೇದಿಕೆಯಾಗಿವೆ.

ವಿಶೇಷ ಮಕ್ಕಳು ತಯಾರಿಸಿದ ಗೂಡುದೀಪಗಳ ಮಾರಾಟ, ಜೇನುಕೃಷಿ ಕುರಿತು ಮಾಹಿತಿ, ಪರಾಗಸ್ಪರ್ಶದ ಅಗತ್ಯದ ಕುರಿತು ಜಾಗೃತಿ, ಹೂ, ತರಕಾರಿ ಮತ್ತು ಹಣ್ಣುಗಳ ಬೀಜ ಮಾರಾಟವೂ ಇರುವ ಮೇಳದಲ್ಲಿ ಆಹಾರ ಪದಾರ್ಥಗಳು, ನೈಸರ್ಗಿಕ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ. 

ADVERTISEMENT

ಕರಂಡೆ, ಆಮ್ಟೆ ಮಿಡಿ, ಜೀರಿಗೆ ಮಿಡಿ, ಅಪ್ಪೆ ಮಿಡಿ ಮುಂತಾಗಿ ಉಪ್ಪಿನಕಾಯಿಯ ವೈವಿಧ್ಯಮಯ ಲೋಕವೇ ಮೇಳದಲ್ಲಿ ಇದ್ದು ಎಕ್ಕದ ಎಣ್ಣೆ, ನನ್ನಾರಿ ಶರಬತ್‌, ಚಿಕ್ಕು ಕಾಫಿ, ಬೀಟ್‌ರೂಟ್ ಪೌಡರ್‌, ಕರಿಬೇವು ಎಲೆಯ ಗ್ರೀನ್ ಟೀ, ಹಲಸಿನ ಬೀಜ ಕುಕೀಸ್‌, ಕಫ ನಿವಾರಿ, ಬೀಜಗಳು, ಗಿಡಗಳು, ಗೊಬ್ಬರ, ಗಿಡಗಳನ್ನು ನೆಡುವ ಬ್ಯಾಗ್‌...ಹೀಗೆ ನಾನಾ ಬಗೆಯ ವಸ್ತುಗಳು ಇಲ್ಲಿ ಲಭ್ಯ. 

ಭಗೀರಥ’ ಮೊಂತೆರೊಗೆ ಪ್ರಶಸ್ತಿ

ನೀರಿಲ್ಲದೆ ಕೃಷಿ ಮಾಡಲು ಸಾಧ್ಯವಿಲ್ಲದ ಜಾಗದಲ್ಲಿ ಭಗೀರಥನಂತೆ ಗುಡ್ಡವನ್ನು ಕೊರೆದು ಸುರಂಗ ಮಾಡಿದ ಜಾನ್ ಮೊಂತೆರೊ ಅವರಿಗೆ ಕಾರ್ಯಕ್ರಮದಲ್ಲಿ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಂಟ್ವಾಳ ತಾಲ್ಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ ಜಾನ್ ಅವರಿಗೆ ಈಗ 71 ವರ್ಷ ವಯಸ್ಸು. 30 ವರ್ಷಗಳ ಹಿಂದೆ ತಮ್ಮ ಮನೆಯ ಸಮೀಪದಲ್ಲಿ ಅವರು ಕೊರೆದದ್ದು ಒಟ್ಟು 7 ಸುರಂಗಗಳು. ಈ ಪೈಕಿ ಮೂರನ್ನು ಒಂದೇ ಬಾವಿಯ ಒಳಗೆ ಮತ್ತು ಉಳಿದವುಗಳನ್ನು ಗುಡ್ಡದ ಅಂಚಿನಲ್ಲಿ ಕೊರೆಯಲಾಗಿದೆ. ಈ ಎಲ್ಲ ಸುರಂಗಗಳಲ್ಲೂ ಈಗ ನೀರು ಇದೆ. ಒಂದೂವರೆ ಎಕರೆ ಜಮೀನು ಇರುವ ಅವರು ಅದರಲ್ಲಿ ಕಂಗಿನ ತೋಟ ಮಾಡಿದ್ದಾರೆ.  

‘ನಾವು ವಾಸವಿದ್ದ ಜಾಗದಲ್ಲಿ ನೀರಿಗೆ ತೀವ್ರ ಬರವಿತ್ತು. ನಿತ್ಯದ ಅಗತ್ಯಕ್ಕೆ ಬಾವಿುಯೇ ಆಸರೆಯಾಗಿತ್ತು. ಅದು ಬೇಸಿಗೆಯಲ್ಲಿ ಬತ್ತುತ್ತಿತ್ತು. ಹೀಗಾಗಿ ಕೃಷಿ ಮಾಡುವುದು ಕಷ್ಟಸಾಧ್ಯವಾಗಿತ್ತು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಲು ಸುರಂಗ ಕೊರೆಯಲು ಶುರು ಮಾಡಿದೆ. ಬೇರೆಯವರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಆದ್ದರಿಂದ ಸುರಂಗ ಕೊರೆಯಲು ರಾತ್ರಿಯನ್ನು ಆಯ್ಕೆ ಮಾಡಿಕೊಂಡೆ. ಚಿಮಿಣಿ ದೀಪದ ಬೆಳಕಿನಲ್ಲಿ ರಾತ್ರಿ 12 ಗಂಟೆಯ ವರೆಗೆ ಕೆಲಸ ಮಾಡುತ್ತಿದ್ದೆ’ ಎಂದು ಅವರು ತಿಳಿಸಿದರು. ‌

‘10 ಕೋಲಿನಿಂದ 40 ಕೋಲು (ಒಂದು ಕೋಲು ಎಂದರೆ 2.5 ಅಡಿಯಷ್ಟು ಉದ್ದದ ಅಳತೆಗೋಲು) ಉದ್ದದ ವರೆಗಿನ ಸುರಂಗವನ್ನು ಕೊರೆದಿದ್ದೇನೆ. ಬಾವಿಯೊಳಗೆ ತಲಾ 15 ಕೋಲು ಉದ್ದದ ಸುರಂಗ ಇದೆ. ಪ್ರತಿಯೊಂದು ಸುರಂಗವೂ ಆರು ಅಡಿಗಳಷ್ಟು ಎತ್ತರ ಮತ್ತು 2 ಅಡಿಗಳಷ್ಟು ಅಗಲ ಇದೆ. ಸುರಂಗಳಿಂದ ಬರುವ ನೀರನ್ನು ಟ್ಯಾಂಕೊಂದರಲ್ಲಿ ಸಂಗ್ರಹಿಸಿಟ್ಟು ಮನೆ ಅಗತ್ಯಕ್ಕೂ ಬಳಸುತ್ತೇವೆ. ಕೃಷಿಗೆ ಕೊಳವೆ ಬಾವಿ ನೀರಿಗಿಂತ ಸುರಂಗದ ನೀರು ಹೆಚ್ಚು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟರು. 

ಸಸ್ಯೋತ್ಸವವನ್ನು ಜಿಲ್ಲಾಧಿಕಾರಿ ದರ್ಶನ್ ಕೆ.ವಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್‌, ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್‌ ರಾಜ್ ಸೊರಕೆ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಂತಾದವರು ಪಾಲ್ಗೊಂಡಿದ್ದರು.

ಚರಕದ ಪ್ರಾತ್ಯಕ್ಷಿಕೆಯನ್ನು ನೋಡಿದ ವಿದ್ಯಾರ್ಥಿಗಳು

ಬುಟ್ಟಿ ನೇಯುವ ‘ಕಲೆ’ಯ ಪ್ರದರ್ಶನ; ಖಾದಿ ಉತ್ಪನ್ನಗಳ ಮಾರಾಟ ಗಿಡಮೂಲಿಕೆಗಳಿಂದ ತಯಾರಿಸಿದ ನಾನಾ ಬಗೆಯ ಔಷಧಿಗಳು ಸುರಂಗ ಕೊರೆದ ಜಾನ್ ಮೊಂತೆರೊಗೆ ‘ರೈತ ರತ್ನ’ ಪ್ರಶಸ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.