ADVERTISEMENT

ನ್ಯಾಪ್‌ಕಿನ್ ಒದಗಿಸಿ, ಗೇಮ್ಸ್ ನಿಷೇಧಿಸಿ: ಬಾಲಕಿಯರ ಆಗ್ರಹ

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಂವಾದ: ಪಠ್ಯ ಪುಸ್ತಕ ಒದಗಿಸಲು, ಕಬ್ಬಿಣಾಂಶದ ಮಾತ್ರೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 15:24 IST
Last Updated 17 ಜೂನ್ 2022, 15:24 IST
ಸಂವಾದದಲ್ಲಿ ‍ಪಾಲ್ಗೊಂಡಿದ್ದ ಮಕ್ಕಳು, ಪ್ರತಿನಿಧಿಗಳು ಮತ್ತು ಅಧಿಕಾರಿಗಳು
ಸಂವಾದದಲ್ಲಿ ‍ಪಾಲ್ಗೊಂಡಿದ್ದ ಮಕ್ಕಳು, ಪ್ರತಿನಿಧಿಗಳು ಮತ್ತು ಅಧಿಕಾರಿಗಳು   

ಮಂಗಳೂರು: ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ವಿತರಿಸುವ ಯೋಜನೆಯನ್ನು ಮತ್ತೆ ಆರಂಭಿಸಬೇಕು ಎಂದು ಹೆಣ್ಣುಮಕ್ಕಳು ಬೇಡಿಕೆ ಇಟ್ಟರೆ, ಗಂಡುಮಕ್ಕಳು ಮೊಬೈಲ್ ಫೋನ್‌ನಲ್ಲಿ ಗೇಮ್‌ಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಮಕ್ಕಳು ಅಹವಾಲುಗಳನ್ನು ಸಲ್ಲಿಸಿದರು.

ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡುವ ಯೋಜನೆ ನಿಲ್ಲಿಸಿ ಎರಡು ವರ್ಷಗಳಾಗಿವೆ. ನ್ಯಾಪ್‌ಕಿನ್‌ಗಳು ಸಿಗದೆ ತುಂಬ ಸಮಸ್ಯೆಯಾಗುತ್ತಿದೆ. ಆದ್ದರಿಂದ ಯೋಜನೆ ಮರುಜಾರಿಗೆ ಮುಂದಾಗಬೇಕು ಎಂದು ಬಾಲಕಿಯೊಬ್ಬಳು ಆಗ್ರಹಿಸಿದಳು. ಇದಕ್ಕೆ ಉತ್ತರಿಸಿದ ಆಯೋಗದ ಸದಸ್ಯರು ಯೋಜನೆ ಮತ್ತೆ ಜಾರಿಗೆ ಬರಬೇಕು ಎಂದು ಆಯೋಗವೂ ಬಯಸುತ್ತಿದೆ. ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೋವಿಡ್‌–19ರ ನಂತರ ಮಕ್ಕಳಲ್ಲಿ ಮೊಬೈಲ್ ಗೇಮ್‌ಗಳ ಗೀಳು ಹೆಚ್ಚಾಗಿದೆ. ಆದ್ದರಿಂದ ಗೇಮ್‌ಗಳ ಮೇಲೆ ನಿಷೇಧ ಹೇರಬೇಕು ಎಂದು ಬಾಲಕನೊಬ್ಬ ಕೋರಿಕೊಂಡ. ಇದಕ್ಕೆ ಉತ್ತರಿಸಿದ ಸದಸ್ಯರು ಗ್ಯಾಜೆಟ್‌ಗಳಲ್ಲಿ ಮಗ್ನರಾಗುವ ಮಕ್ಕಳ ಸಂಖ್ಯೆ ಈಚೆಗೆ ಹೆಚ್ಚಾಗಿದ್ದು ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೇರೇಪಿಸುವುದರಿಂದ ಇದನ್ನು ನಿಯಂತ್ರಿಸಬಹುದು ಎಂದರು.

ಮಕ್ಕಳ ರಕ್ಷಣಾ ಸಂಸ್ಥೆಗಳಿಗೆ ಈ ಹಿಂದೆ ವೈದ್ಯರು ಭೇಟಿ ನೀಡುತ್ತಿದ್ದರು. ಈಗ ಆ ಪರಿಪಾಠ ಇಲ್ಲದಾಗಿದೆ ಎಂದು ಹೇಳಿದ ಮಕ್ಕಳಿಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್‌ ಕುಮಾರ್, ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು ಈ ಸಂಸ್ಥೆಗಳಿಗೆ ಭೇಟಿ ನಿಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸ್ಥಳೀಯ ವೈದ್ಯರು ಕೂಡ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಕಬ್ಬಿಣಾಂಶದ ಮಾತ್ರೆಗಳ ವಿತರಣೆಯಾಗುತ್ತಿಲ್ಲ ಎಂಬ ದೂರಿಗೆ ಉತ್ತರಿಸಿದ ಆರೋಗ್ಯಾಧಿಕಾರಿ ಕಳೆದ ತಿಂಗಳಲ್ಲಿ ಮಾತ್ರೆಗಳ ಕೊರತೆ ಇತ್ತು. ಈಗ ಮಾತ್ರಗಳು ತಲುಪಿದ್ದು ಕೆಲವೇ ದಿನಗಳಲ್ಲಿ ವಿತರಿಸಲಾಗುವುದು ಎಂದರು. ಪಠ್ಯ ಪುಸ್ತಕಗಳ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರಿಗೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣಾಧಿಕಾರಿ ಸುಧಾಕರ್‌, ಜಿಲ್ಲೆಯಲ್ಲಿ ಶೇಕಡಾ 74ರಷ್ಟು ಪುಸ್ತಕಗಳ ವಿತರಣೆ ಪೂರ್ತಿಯಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ, ಆಯೋಗದ ಸದಸ್ಯರಾದ ಎಚ್.ಸಿ.ರಾಘವೇಂದ್ರ, ಪರಶುರಾಮ, ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ನೋಡಲ್ ಅಧಿಕಾರಿ ನವೀನ್‍ಚಂದ್ರ ಕುಲಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಾಪ ಬೋವಿ, ಪುತ್ತೂರು ಡಿವೈಎಸ್‌ಪಿ ಗಾನಾ ಪಿ.ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನಿ ಡಿಸೋಜ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಕೆ.ವಿ, ಶಾಂತಿ ಸಂದೇಶ ಟ್ರಸ್ಟ್ ನಿರ್ದೇಶಕಿ ದುಲ್ಸಿನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯಮುನಾ ಇದ್ದರು.

ವ್ಯಸನಮುಕ್ತಿ ಕೇಂದ್ರ ಇಲ್ಲ
ಚೈಲ್ಡ್‌ ಲೈನ್ ಪ್ರತಿನಿಧಿಗಳು ಜಿಲ್ಲೆಯಲ್ಲಿ ವ್ಯಸನಮುಕ್ತಿ ಕೇಂದ್ರ ಇಲ್ಲ ಎಂದು ದೂರಿದರು. ಮದ್ಯ, ಮಾದಕ ವಸ್ತು ಮತ್ತು ಧೂಮಪಾನ ಪಿಡುಗು ಹೆಚ್ಚುತ್ತಿದೆ. ಆದರೆ ವ್ಯಸನಗಳಿಂದ ಮಕ್ಕಳನ್ನು ರಕ್ಷಿಸಲು ಯಾವುದೇ ಸೌಲಭ್ಯ ಇಲ್ಲ ಎಂದು ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಸಿಡಬ್ಲ್ಯುಸಿ ಅಧ್ಯಕ್ಷ ರೆನಿ ಡಿ’ಸೋಜಾ ಜಿಲ್ಲೆಯಲ್ಲಿ ಕೇಂದ್ರ ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ. ಆದರೆ ಪೂರಕ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿಸಿದರು. ಮತ್ತೊಮ್ಮೆ ಪ್ರಸ್ತಾಪ ಸಲ್ಲಿಸುವಂತೆ ಆಯೋಗದ ಸದಸ್ಯ ಡಿ.ಶಂಕರಪ್ಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.