ADVERTISEMENT

ಕೊಡಿಯಾಲ್‌ಬೈಲ್‌ ಬಡಾವಣೆ | ರಾಜಕಾಲುವೆ ಸಮಸ್ಯೆ: ಬೇಕಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 6:04 IST
Last Updated 9 ಫೆಬ್ರುವರಿ 2024, 6:04 IST
ಬಲಿಪರತೋಟದ ರಾಜಕಾಲುವೆಯಲ್ಲಿ ತ್ಯಾಜ್ಯ ಕಟ್ಟಿಕೊಂಡಿದ್ದು, ಗಿಡಗಂಟಿ ಬೆಳೆದಿದೆ
ಬಲಿಪರತೋಟದ ರಾಜಕಾಲುವೆಯಲ್ಲಿ ತ್ಯಾಜ್ಯ ಕಟ್ಟಿಕೊಂಡಿದ್ದು, ಗಿಡಗಂಟಿ ಬೆಳೆದಿದೆ   

ಮಂಗಳೂರು: ಕೊಡಿಯಾಲ್‌ಬೈಲ್‌ ಬಡಾವಣೆ ವ್ಯಾಪ್ತಿಯ ಬಿಜೈ ಭಾರತಿನಗರದ ಬಲಿಪರತೋಟದಲ್ಲಿ ರಾಜಕಾಲುವೆ ಹಲವಾರು ಸಮಸ್ಯೆಗಳಿಂದ ಕೂಡಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಸ್ವಚ್ಛ, ಶುದ್ಧ ನೀರಿನಿಂದ ತುಂಬಿದ್ದ ರಾಜಕಾಲುವೆ ಈಗ ತ್ಯಾಜ್ಯ, ಕಲುಷಿತ ನೀರಿನಿಂದ ಮಲಿನಗೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಕಾಲುವೆಯ ಸಮೀಪವಿರುವ ಅಪಾರ್ಟ್‌ಮೆಂಟ್‌, ಮನೆಗಳಿಂದ ತ್ಯಾಜ್ಯ, ಕಲುಷಿತ ನೀರು ಬಿಡಲಾಗುತ್ತಿದೆ. ರಾಜಕಾಲುವೆ ವಿವಿಧ ಕಡೆಗಳ ಕಾಲುವೆಗಳಿಂದ ಬರುವ ತ್ಯಾಜ್ಯದಿಂದ ಕಟ್ಟಿಕೊಂಡಿದ್ದು, ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿದೆ. ರಾಜಕಾಲುವೆಯ ಸೇತುವೆ ಸಮೀಪ ಖಾಸಗಿಯವರ ಆವರಣ ಗೋಡೆ ಕುಸಿದಿದೆ. ಪರಿಣಾಮ ಸೇತುವೆ, ಆವರಣ ಗೋಡೆ, ಅಡಿಪಾಯ ಕುಸಿಯುವ ಭೀತಿ ಎದುರಾಗಿದೆ ಎಂಬುದು ಸ್ಥಳೀಯರ ಆರೋಪ.

ತಗ್ಗು ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ಇಲ್ಲಿ ಒಂದು ಗಂಟೆ ಜೋರು ಮಳೆ ಬಿದ್ದರೂ ಅಕ್ಕಪಕ್ಕದ ಮನೆಗಳಿಗೆ ಕಾಲುವೆ ನೀರು ನುಗ್ಗುತ್ತದೆ. ಪ್ರತಿವರ್ಷ ಸ್ಥಳೀಯ ನಿವಾಸಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಲುವೆ ಸಮೀಪ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನವಿದೆ. ಅದರ ಆವರಣ ಪ್ರತಿವರ್ಷ ಮಳೆಗಾಲದಲ್ಲಿ ಕಾಲುವೆಯ ಕಲುಷಿತ ನೀರಿನಿಂದ ಆವೃತಗೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂಬುದು ಇಲ್ಲಿನ ನಿವಾಸಿಗಳ ಒಕ್ಕೊರಲಿನ ಮನವಿ.

ADVERTISEMENT

ಮಳೆಗಾಲದಲ್ಲಿ 1 ಗಂಟೆ ಜೋರು ಮಳೆ ಬಂದರೂ ತುಂಬಿಕೊಳ್ಳುವ ರಾಜಕಾಲುವೆಯ ನೀರು ಮನೆಯೊಳಗೆ ನುಗ್ಗುತ್ತದೆ. ಪ್ರತಿವರ್ಷ ಈ ಗೋಳು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ಮನೆಗೆ ಬಾಗಿಲು ಹಾಕಿ ಬೇರೆ ಕಡೆ ತೆರಳಬೇಕಾದ ಸನ್ನಿವೇಶ ಎದುರಾಗುತ್ತದೆ. ಮನೆಯ ಅಡಿಪಾಯ ಎತ್ತರಿಸಿ ಮನೆ ನಿರ್ಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯ ನಿವಾಸಿಯೊಬ್ಬರು ಅಲವತ್ತುಕೊಂಡರು.

ರಾಜಕಾಲುವೆ ಸಮಸ್ಯೆ ಬಗ್ಗೆ ಅರಿವಿದ್ದು ಪರಿಹಾರ ಕ್ರಮಗಳ ಪ್ರಯತ್ನ ನಡೆಯುತ್ತಿದೆ. ಈ ಪ್ರದೇಶ ತಗ್ಗು ಪ್ರದೇಶ ಆಗಿರುವುದರಿಂದ ಪ್ರತಿವರ್ಷ ಮನೆಗಳಿಗೆ ಕಾಲುವೆ ನೀರು ನುಗ್ಗುವ ಸಮಸ್ಯೆ ಉಂಟಾಗಿದೆ. ಸಮಸ್ಯೆ ಪರಿಹರಿಸಲು ಬಲ್ಲಾಳ್‌ಭಾಗ್‌ ಸೇತುವೆಯನ್ನು ಎತ್ತರಿಸಿ ನಿರ್ಮಿಸಬೇಕು. ಆದರೆ ಆ ಕೆಲಸ ಸುಲಭ ಸಾಧ್ಯವಲ್ಲ. ಸೇತುವೆ ಕಾಮಗಾರಿ ನಡೆಸಬೇಕಾದರೆ ಬಲ್ಲಾಳ್‌ಭಾಗ್‌ ರಸ್ತೆ, ಎಂ.ಜಿ.ರೋಡ್‌ ಬಂದ್‌ ಮಾಡಬೇಕಾಗುತ್ತದೆ. ಇದಕ್ಕೆ ಪೊಲೀಸ್‌ ಇಲಾಖೆ ಅನುಮತಿ ನೀಡಬೇಕಾಗುತ್ತದೆ. ಬಲ್ಲಾಳ್‌ಭಾಗ್‌ ಬಳಿ ಸೇತುವೆ ನಿರ್ಮಿಸಲು ₹3 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ರಾಜಕಾಲುವೆಯ ಚರಂಡಿ ಸ್ವಚ್ಛಗೊಳಿಸಲು, ಕಳೆಗಿಡಗಳನ್ನು ತೆಗೆಯಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿದರು.

ಬಲಿಪರತೋಟದ ರಾಜಕಾಲುವೆಯಲ್ಲಿ ತ್ಯಾಜ್ಯ ಕಟ್ಟಿಕೊಂಡಿದ್ದು ಗಿಡಗಂಟಿ ಬೆಳೆದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.