ADVERTISEMENT

ರಸ್ತೆ ವಿಸ್ತರಣೆ, ಪಾರ್ಕ್ ಅಭಿವೃದ್ಧಿಯ ಕನಸು

ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಆಧುನಿಕತೆಯ ಜೊತೆ ಗ್ರಾಮೀಣ ಪರಿಸರ ಉಳಿಸಿಕೊಂಡಿರುವ ಪ್ರದೇಶಗಳು

ವಿಕ್ರಂ ಕಾಂತಿಕೆರೆ
Published 13 ಡಿಸೆಂಬರ್ 2025, 4:23 IST
Last Updated 13 ಡಿಸೆಂಬರ್ 2025, 4:23 IST
ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಕಲ್ಲಕಂಡ ಉದ್ಯಾನ
ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಕಲ್ಲಕಂಡ ಉದ್ಯಾನ   

ವಾರ್ಡ್ ವಿಶೇಷ: ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಿಸಿ, ಮತ್ತೆರಡು ಬದಿಗಳಲ್ಲಿ ಫಲ್ಗುಣಿ ನದಿಯ ತಂಪುಗಾಳಿ ಬೀಸುವ ವಾರ್ಡ್‌ನ ಒಳಗಿನ ಪ್ರಮುಖ ಪ್ರದೇಶಗಳಿಗೆ ಕೋಡಿಕಲ್ ಮುಖ್ಯರಸ್ತೆಯ ಜೀವನಾಡಿ. ಸಮುದಾಯ ಮಂದಿರಗಳು, ಭಜನಾ ಮಂದಿರಗಳು, ಕೋಲ ನಡೆಯುವ ಸ್ಥಳಗಳು ಒಳಗೊಂಡ ವಾರ್ಡ್‌ನಲ್ಲಿ ಯುವಕರ ಸಂಘಟನೆಗಳು ಸಕ್ರಿಯವಾಗಿವೆ. 

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಮತ್ತು ಫಲ್ಗುಣಿ ನದಿಯ ಬದಿಯಲ್ಲಿ ಹಳೆಯ ಬೇರುಗಳನ್ನು ಉಳಿಸಿಕೊಂಡೇ ಹೊಸ ಚಿಗುರಿಗೆ ಅವಕಾಶ ಮಾಡಿಕೊಟ್ಟಿರುವ ಬಂಗ್ರ ಕೂಳೂರು ವಾರ್ಡ್‌ಗೆ ಕೋಡಿಕಲ್‌ನಿಂದ ದೇರೆಬೈಲ್ ಪಶ್ಚಿಮದ ಪ್ರದೇಶವನ್ನು ಸಂಪರ್ಕಿಸುವ ಮುಖ್ಯರಸ್ತೆ ಒಂದು ಬಗೆಯಲ್ಲಿ ಜೀವನಾಡಿ ಇದ್ದಂತೆ. ಈ ರಸ್ತೆಯನ್ನು ಸೇರುವ ಧಾವಂತದಲ್ಲಿದ್ದ ಹಿಟಾಚಿಯೊಂದು ಈಚೆಗೆ ಎರಡನೇ ಬಿ ಕ್ರಾಸ್‌ನಲ್ಲಿ ಸಿಲುಕಿಕೊಂಡಿತ್ತು. ವಿದ್ಯುತ್ ಕಂಬಗಳಿಗೆ ನೇತು ಹಾಕಿದ ಕೇಬಲ್‌ಗಳನ್ನು ಮೇಲೆತ್ತಿ ದಾರಿಮಾಡಿಕೊಂಡು ಅದು ಮುಖ್ಯರಸ್ತೆ ಸೇರಲು 20 ನಿಮಿಷಗಳೇ ಬೇಕಾದವು. ಮುಂದೆ ಹೋಗಲು ಸಾಧ್ಯವಾಗದೆ ಕಾಯುತ್ತಿದ್ದ ವಾಹನ ಸವಾರರ ಬಾಯಲ್ಲಿ ಆಗ ಕೇಳಿಬಂದ ಮಾತು ಒಂದೇ ‘ಇದು ಇಲ್ಲಿನ ನಿತ್ಯದ ಸಮಸ್ಯೆ...’

ಬಂಗ್ರ ಕೂಳೂರು ವಾರ್ಡ್‌ನ ಕೋಡಿಕಲ್ ಮುಖ್ಯರಸ್ತೆಯ ದಂಬೆಲ್‌, ಕಲ್ಲಕಂಡ, ಆಲಗುಡ್ಡೆ, ಕಂಬೆರ್ಲು ಮುಂತಾದ ಪ್ರದೇಶಗಳ ಬಹುತೇಕ ರಸ್ತೆಗಳೆಲ್ಲವೂ ಇದೇ ರೀತಿ ಇಕ್ಕಟ್ಟಿನಿಂದ ಕೂಡಿವೆ. ರಸ್ತೆ ಬದಿಯಲ್ಲಿ ದಶಕಗಳ ಹಿಂದೆಯೇ ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಈ ಸಮಸ್ಯೆಗೆ ಪರಿಹಾರ ಇಲ್ಲ ಎಂಬಂತಾಗಿದೆ. ಆದರೆ, ಹೊಸತಾಗಿ ಮನೆ ಕಟ್ಟುವವರಿಗೆ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ADVERTISEMENT

ವಾರ್ಡ್‌ನಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿ ಶೇಕಡ 95ರಷ್ಟು ಪೂರ್ಣಗೊಂಡಿದ್ದು ಅಗಲೀಕರಣವಾದ ರಸ್ತೆಗಳ ಕಾಂಕ್ರಿಟೀಕರಣದ ಕೆಲಸ ಸಂಪೂರ್ಣಗೊಂಡಿದೆ. ಅಗಲೀಕರಣ ಮತ್ತು ಅಭಿವೃದ್ಧಿಗೆ ಉಳಿದಿರುವ ಕೆಲಸ ಆದಷ್ಟು ಬೇಗ ಮುಕ್ತಾಯಗೊಳ್ಳಲು ನಿವಾಸಿಗಳು ಕಾಯುತ್ತಿದ್ದಾರೆ. ವಾರ್ಡ್ ಅಭಿವೃದ್ಧಿಯಾದಂತೆ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ ಪಾರಂಪರಿಕ ಅಸ್ಮಿತೆಯನ್ನು ಉಳಿಸಿಕೊಂಡಿರುವ ಪ್ರದೇಶಗಳು ಕೂಡ ಈಗ ಜನನಿಬಿಡ. 

ವಾರ್ಡಿನ ಬಹುತೇಕ ಪ್ರದೇಶಗಳು ನಾಗರಿಕ ಸೌಲಭ್ಯಗಳನ್ನು ಒಳಗೊಂಡಿದ್ದರೂ ಹಳ್ಳಿಯ ವಾತಾವರಣನ್ನು ಉಳಿಸಿಕೊಂಡಿವೆ. ಆಲಗುಡ್ಡೆ, ತಂರ್ಜಿಗುತ್ತು, ಕಲ್ಲಕಂಡ, ಭೂತದ ಕಲ ಇರುವ ಕಂಬೆರ್ಲು ಮುಂತಾದ ಹೆಸರುಗಳೇ ಇಲ್ಲಿನ ವೈಶಿಷ್ಟ್ಯಗಳನ್ನು ಸೂಚಿಸುತ್ತವೆ. ಕೆಲವು ಮನೆಗಳು ಮತ್ತು ಅಂಗಡಿಗಳನ್ನು ನೋಡುತ್ತಿದ್ದರೆ ಗತಕಾಲದ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಕೆಲವು ಕಡೆಗಳಲ್ಲಿ ಕುರುಚಲು ಕಾಡು, ಗಿಡಗಂಟಿ ಬೆಳೆದಿದೆ. ಇದರಿಂದ ಕೆಲವು ಸಂದರ್ಭದಲ್ಲಿ ಹಾವು–ಚೇಳುಗಳ ಆತಂಕ ಉಂಟಾಗುತ್ತದೆ ಎಂದು ದಂಬೆಲ್ ತಂರ್ಜಿಗುತ್ತು ಒಳರಸ್ತೆಯಲ್ಲಿ ಮಾತನಾಡಲು ಸಿಕ್ಕಿದ ವಿಲ್ಮಾ ಜೋಸೆಫ್ ಹೇಳಿದರು. 

ಕಲ್ಲಕಂಡ ಪಾರ್ಕ್‌ಗೆ ಬೇಕು ಕಾಯಕಲ್ಪ

ಫಲ್ಗುಣಿ ನದಿಯ ನೀರಿನ ಅಲೆಯ ಬದಿಯಲ್ಲಿ, ಸುತ್ತ ಹಸಿರಿನಿಂದ ಕಂಗೊಳಿಸುತ್ತಿರುವ ಕಲ್ಲಕಂಡ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಒಂದಷ್ಟು ಆಗಿದ್ದು ಪೂರ್ಣ ಕಾಯಕಲ್ಪಕ್ಕಾಗಿ ಕಾಯುತ್ತಿದೆ. 

ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವವರ ಸಂಖ್ಯೆ ದೊಡ್ಡದಿದೆ. ಹೊರಾಂಗಣ ಬ್ಯಾಡ್ಮಿಂಟನ್ ಮತ್ತಿತರ ಆಟದಲ್ಲಿ ತೊಡಗಿಸಿಕೊಳ್ಳುವವರೂ ಬಹಳ ಮಂದಿ ಇದ್ದಾರೆ. ಅವರೆಲ್ಲರೂ ಪಾರ್ಕ್ ಅಭಿವೃದ್ಧಿ ಪೂರ್ಣಗೊಳ್ಳಲು ಕಾತರಗೊಂಡಿದ್ದಾರೆ. 

‘5 ಎಕರೆ ವಿಸ್ತೀರ್ಣದ ಪಾರ್ಕ್‌ನಲ್ಲಿ ₹ 1 ಕೋಟಿ ವೆಚ್ಚ ಮಾಡಿ ವಾಕಿಂಗ್ ಪಾಥ್ ಮತ್ತಿತರ ಕೆಲಸಗಳನ್ನು ಮಾಡಲಾಗಿದೆ. ಅಮೃತ್ ಯೋಜನೆಯಲ್ಲಿ ಅಭಿವೃದ್ಧಿಗೆ ₹ 2 ಕೋಟಿ ಬಂದಿದೆ. ಇನ್ನೂ ₹ 3 ಕೋಟಿ ಇದ್ದರೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಬಹುದಾಗಿದೆ’ ಎಂದು ಪಾಲಿಕೆಯ ನಿಕಟಪೂರ್ವ ಸದಸ್ಯ ಕಿರಣ್ ಕುಮಾರ್ ಹೇಳಿದರು. 

ಅಭಿವೃದ್ಧಿ ಪಥಕ್ಕೆ ಜನಸ್ಪಂದನ’

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಬಂಗ್ರ ಕೂಳೂರು ವಾರ್ಡ್‌ನಲ್ಲಿ. ಇದರ ಪ್ರತಿಫಲವೆಂಬಂತೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯೂ ನಡೆದಿದೆ. ಮೂರು ಅಂಗನವಾಡಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಮಳೆನೀರು ಸರಾಗವಾಗಿ ಹರಿದು ಹೋಗಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಸಾಧ್ಯವಿರುವ ಕಡೆಗಳಲ್ಲೆಲ್ಲ ಚರಂಡಿಗಳನ್ನು ವೆಟ್‌ವೆಲ್‌ಗಳಿಗೆ ಜೋಡಿಸಲಾಗಿದೆ. ತಗ್ಗು ಪ್ರದೇಶ ಮತ್ತು ನದಿತೀರದ ಪ್ರದೇಶಗಳಲ್ಲಿ ಮಾತ್ರ ಈ ಕೆಲಸಕ್ಕೆ ಅಡ್ಡಿಯಾಗಿದೆ. ಹೊಸ ವೆಟ್‌ವೆಲ್ ನಿರ್ಮಾಣಕ್ಕೆ ಅಂದಾಜು ಮೊತ್ತ ಸಿದ್ಧಪಡಿಸಲಾಗಿದೆ. 40 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು ಅದರ ಕಾಮಗಾರಿ ಪೂರ್ಣಗೊಂಡ ನಂತರ ನೀರಿನ ಬವಣೆ ಇರುವುದಿಲ್ಲ. ವಸತಿ ಪ್ರದೇಶಗಳಿಗೆ ಹಿನ್ನೀರಿನಿಂದ ಉಪ್ಪಿನಂಶ ಬಾರದಂತೆ ತಡೆಯುವ ಯೋಜನೆ ದಂಬೆಲ್‌ನಲ್ಲಿ ಕಾರ್ಯಗತವಾಗುತ್ತಿದೆ. ಕಿರಣ್ ಕುಮಾರ್ ಪಾಲಿಕೆಯ ನಿಕಟಪೂರ್ವ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.