ADVERTISEMENT

ಪುತ್ತೂರು| ಹೋರಾಟಕ್ಕೆ ಬರಲು ಬಿಜೆಪಿ ಶಾಸಕರು ಹಿಂದೇಟು: ಅಶೋಕ್‌ ರೈ

ಸಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ; ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:30 IST
Last Updated 3 ಫೆಬ್ರುವರಿ 2026, 2:30 IST
ಪುತ್ತೂರಿನ ಕೊಟೆಚಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಅಶೋಕ್ ರೈ ಪಾಲ್ಗೊಂ‌ಡಿದ್ದರು 
ಪುತ್ತೂರಿನ ಕೊಟೆಚಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಅಶೋಕ್ ರೈ ಪಾಲ್ಗೊಂ‌ಡಿದ್ದರು    

ಪುತ್ತೂರು: ದೇವಸ್ಥಾನ, ದೈವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆದು ಬಂದಿದೆ. ಆದರೆ ಬಾರಿ ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಕೋಳಿ ಅಂಕದ ವಿಚಾರದಲ್ಲಿ ಈಗ ಎಲ್ಲಿದ್ದಾರೆ. ಎಲ್ಲರೂ ಬರಬೇಕಿತ್ತಲ್ಲಾ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು.

ತುಳುನಾಡ ಆಚರಣೆ, ಸಂಪ್ರದಾಯ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯು ಕೊಟೆಚಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕ ಹೋರಾಟಕ್ಕೆ ಬರುವಂತೆ ಅವಿಭಜಿತ ಜಿಲ್ಲೆಯ 13 ಮಂದಿ ಶಾಸಕರ ಬಾಗಿಲು ಬಡಿಯಿರಿ. ಕೋಳಿ ಅಂಕ ವಿಚಾರವಾಗಿ ಅಧಿವೇಶನದಲ್ಲಿ ನಾನು ಪ್ರಸ್ತಾಪಿಸುವೆ. ನನಗೆ ಯಾರ ಹೆದರಿಕೆಯೂ ಇಲ್ಲ ಎಂದು ಅವರು ಹೇಳಿದರು.

ADVERTISEMENT

ಕೋಳಿ ಅಂಕದ ಕುರಿತು ವಾಟ್ಸಾಪ್ ಸಂದೇಶ ಕಳುಹಿಸಿದರೆ 5 ಸಾವಿರ ಮಂದಿ ಸೇರುತ್ತಾರೆ. ಇಂದು ಇಲ್ಲಿ ಸೇರಿದ ಮಂದಿಯ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆರಂಭದಲ್ಲಿ ಇಷ್ಟೊಂದು ಸಂಖ್ಯೆ ಸಾಕು. ಆದರೆ ನಮ್ಮಲ್ಲಿ ಒಗ್ಗಟ್ಟು ಬೇಕು. ಒಂದೇ ನಿರ್ಧಾರ ಇರಬೇಕು. ರಾಜಕೀಯವನ್ನು ಒಳ ಸೇರಿಸಿಕೊಂಡರೆ ಕಷ್ಟ. ಆಯಾ ಭಾಗದ ಜನರು ತಂಡ ರಚಿಸಿಕೊಂಡು ಆಯಾ ಭಾಗದ ಶಾಸಕರ ಬಳಿಗೆ ಹೋಗಿ ನಮಗೆ ಸಾಂಪ್ರದಾಯಿಕ ಕೋಳಿ ಅಂಕ ಬೇಕು. ಜೂಜು ಕೋಳಿ ಅಂಕ ಬೇಡ ಎಂಬುದನ್ನು ತಿಳಿಸಬೇಕು. ಎಲ್ಲರೂ ಒಟ್ಟು ಸೇರಿ ಹೋರಾಟ ಮಾಡೋಣ. ಪುತ್ತೂರಿನಿಂದಲೇ ಈ ಹೋರಾಟ ಆರಂಭವಾಗಲಿ, ನಿಮ್ಮ ಜತೆ ನಾನಿದ್ದೇನೆ. ಆದರೆ ಜೂಜು ಕಟ್ಟುವ ಕೋಳಿ ಅಂಕದ ಪರ ನಾನಿಲ್ಲ ಎಂದರು.

13 ಮಂದಿ ಶಾಸಕರು ಹಾಗೂ ಸಂಸದರು ಎಲ್ಲರೂ ಹೋದರೆ ಕಾನೂನನ್ನು ಬದಲಾಯಿಸುವುದು ಕಷ್ಟವೇನಲ್ಲ. ಜನಪ್ರತಿನಿಧಿಗಳು ಕಾನೂನು ತರಲು, ಕಾನೂನು ಬದಲಾವಣೆ ಮಾಡಲು ಇರುವವರು. ಭಾಷಣ ಮಾಡಿ ಜನರಿಗೆ ಧಿಕ್ಕಾರ ಹಾಕಲು ಹೇಳುವವರಲ್ಲ ಎಂದು ಅವರು ಹೇಳಿದರು.

ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ಸಂಚಾಲಕ ಬೆಳಿಯಪ್ಪ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸಮಿತಿ ಮುಖಂಡ ಬಟ್ಯಪ್ಪ ಪೂಜಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.