
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಕೊಲೆಗಳ ಹಾಗೂ ಅಸಹಜ ಸಾವು ಪ್ರಕರಣಗಳ ಸಮಗ್ರ ತನಿಖೆಗೆ ಒತ್ತಾಯಿಸಿ, ‘ಕೊಂದವರು ಯಾರು’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಆಂದೋಲನ ನಡೆಸುತ್ತಿರುವ ಮಹಿಳಾ ಮುಖಂಡರು ಪಾಂಗಳದಲ್ಲಿ ದಿ.ಸೌಜನ್ಯಾ ತಾಯಿ ಕುಸುಮಾವತಿ ಅವರನ್ನು ಮಂಗಳವಾರ ಭೇಟಿ ಮಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಈ ಆಂದೋಲನದ ಮುಖಂಡರಾದ ಚಂಪಾ, ‘ನೊಂದ ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಆಂದೋಲನದ ಉದ್ದೇಶ. ಧರ್ಮ, ಜಾತಿಗಳನ್ನು ಮೀರಿ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದೇವೆ. ನಮಗೆ ಬೇರಾವುದೇ ರಾಜಕೀಯ ಕಾರ್ಯಸೂಚಿಗಳಿಲ್ಲ. ದೇಶದಾದ್ಯಂತ ನಡೆಯುವ ಕೊಲೆ, ಅತ್ಯಾಚಾರ, ಮಹಿಳೆಯರ ಮೇಲಿನ ಹಿಂಸಾಚಾರವನ್ನು ಪ್ರಶ್ನೆ ಮಾಡುತ್ತಿದ್ದೇವೆ. ಧರ್ಮಸ್ಥಳ ಪ್ರಕರಣದಲ್ಲೂ ಯಾರು ಹೆಣವಾಗಿ, ಹೂತು ಹೋಗಿದ್ದಾರೋ ಅಂತಹವರ ಬದುಕಿಗೆ ನ್ಯಾಯ ಸಿಗಬೇಕು. ನೊಂದ ಕುಟುಂಬಗಳಿಗೆ ರಕ್ಷಣೆ ಸಿಗಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಮ್ಮ ದಾರಿ ನೇರ’ ಎಂದರು.
‘ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಂತ್ರಸ್ತ ಮಹಿಳೆಯರಲ್ಲಿ ಭರವಸೆ ತುಂಬಿತ್ತು. ಅದೇ ರೀತಿ ಧರ್ಮಸ್ಥಳ ಪ್ರಕರಣದಲ್ಲೂ ನೊಂದ ಕುಟುಂಬಗಳಿಗೆ ಎಸ್‌ಐಟಿ ಭರವಸೆ ತುಂಬಬೇಕು. ಎಸ್‌ಐಟಿಯವರು ಕೆಲ ದೂರುಗಳನ್ನು ಸ್ವೀಕರಿಸಿಲ್ಲ ಎಂಬ ಆರೋಪ ಇದೆ. ಇದಕ್ಕೆ ಅವಕಾಶ ಕಲ್ಪಿಸಬಾರದು’ ಎಂದರು.
‘ಎಸ್‌ಐಟಿಯನ್ನು ಮುಂದುವರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಎಸ್ಐಟಿಯು ಸಾಕ್ಷಿ ದೂರುದಾರ ನೀಡಿದ್ದ ದೂರಿನ ಬಗ್ಗೆ ಮಾತ್ರ ತನಿಖೆ ನಡೆಸಿದರೆ ಸಾಲದು. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವು, ನಾಪತ್ತೆ ಪ್ರಕರಣಗಳ ಸಮಗ್ರವಾದ ತನಿಖೆ ನಡೆಸಬೇಕು. ವೇದವಲ್ಲಿ, ಪದ್ಮಲತಾ, ಸೌಜನ್ಯಾ, ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ... ಮುಂತಾದವರ ಸಾವಿಗೆ ಕಾರಣರಾದವರು ಯಾರು ಎಂಬುದನ್ನು ಬೆಳಕಿಗೆ ತರಬೇಕು. ಎಸ್ಐಟಿ ತನಿಖೆ ದಾರಿ ತಪ್ಪಿದರೆ ನೊಂದವರಿಗೆ ನ್ಯಾಯ ಸಿಗದು’ ಎಂದರು.
ಜ್ಯೋತಿ ಅನಂತ ಸುಬ್ಬರಾವ್, ಶಶಿಕಲಾ ಶೆಟ್ಟಿ, ಗೀತಾ ಸುರತ್ಕಲ್, ಮಮತಾ, ಸುರೇಖಾ, ಶೈಲಜಾ, ಮಲ್ಲಿಗೆ ಮತ್ತಿತರರು ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.