ಮಂಗಳೂರು: ಡಿಜಿಟಲ್ ವೇದಿಕೆಯಲ್ಲಿ ಮೂಲ ಕೊಂಕಣಿ ಸೊಗಡನ್ನು ಪ್ರತಿಬಿಂಬಿಸುವ ಮತ್ತು ಭಾಷಾ ಮಾದರಿ ಅಧ್ಯಯನಕ್ಕೆ ಆನ್‌ಲೈನ್‌ನಲ್ಲಿ ದಾಖಲೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ವಿಶ್ವ ಕೊಂಕಣಿ ಕೇಂದ್ರವು ಇದೇ ಮೊದಲ ಬಾರಿಗೆ ಕೊಂಕಣಿ ಟೆಕ್ಸ್ಟ್ ಕಾರ್ಪಸ್ ಯೋಜನೆ ಕೈಗೆತ್ತಿಕೊಂಡಿದೆ.
ಕೊಂಕಣಿ ಸಂಪ್ರದಾಯದ, ಅದರಲ್ಲೂ ವಿಶೇಷವಾಗಿ ಸಾರಸ್ವತ ಕೊಂಕಣಿಗರು ನಡೆಸುವ ತುಳಸಿ ಪೂಜೆ, ಮದುವೆ ಶಾಸ್ತ್ರ, ಸೋಬಾನೆ ಹಾಡು, ಸಾಹಿತಿಗಳ ಸಾಹಿತ್ಯ ಕೃತಿಗಳ ಆಯ್ದ ಭಾಗ, ಹೀಗೆ ಎಲ್ಲ ಆಕರಗಳನ್ನು ಬಳಸಿ ಸುಮಾರು 2,000 ಮಾದರಿಗಳನ್ನು ಸಂಗ್ರಹಿಸಲು ಕೊಂಕಣಿ ಕೇಂದ್ರ ಮುಂದಾಗಿದೆ. ಸಂಸ್ಕಾರ, ಶವ ಸಂಸ್ಕಾರ, ಮಗುವಿಗೆ ಹೆಸರಿಡುವ ಸಮಾರಂಭ, ತೊಟ್ಟಿಲು ತೂಗುವಾಗ ಹೇಳುವ ಹಾಡುಗಳು ಹೀಗೆ ಉಪ ವಿಷಯಗಳು ಇದರಲ್ಲಿ ಅಡಕವಾಗಿರುತ್ತವೆ. ಇದಕ್ಕಾಗಿ ಕಾಸರಗೋಡಿನಿಂದ ಬೈಂದೂರುವರೆಗಿನ ಆಯ್ದ 20 ಅನುಭವಿಗಳನ್ನು ಈ ಕಾರ್ಯಕ್ಕೆ ನೇಮಿಸಿಕೊಂಡಿದೆ.
‘ಕೊಂಕಣಿ ಭಾಷೆ ಶಾಸ್ತ್ರೀಯವಾಗಿ ದಾಖಲಾಗದೆ, ನಷ್ಟವಾಗುತ್ತಿತ್ತು. ಈಗ ಮೊದಲ ಬಾರಿಗೆ ಕೊಂಕಣಿ ಭಾಷೆಯ ಟೆಕ್ಸ್ಟ್ ಕಾರ್ಪಸ್ ಸಿದ್ಧಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಾರಸ್ವತ ಕೊಂಕಣಿಗರ ಜೀವನ ಕ್ರಮ ಹೇಗಿತ್ತು ಎಂಬುದು ಮುಂದಿನ 100 ವರ್ಷಗಳ ನಂತರ ನೋಡುವವರಿಗೂ ತಿಳಿಯಬೇಕು ಎಂಬುದು ಈ ಕಾರ್ಯದ ಉದ್ದೇಶ. ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಿಂದ ಬಂದಿರುವ 500 ವರ್ಷಗಳ ಹಿಂದಿನ ಮೂಲ ಕೊಂಕಣಿ ರೂಪವನ್ನು ಪ್ರತಿಬಿಂಬಿಸುವ ಪ್ರಯತ್ನವಿದು’ ಎನ್ನುತ್ತಾರೆ ಯೋಜನೆಯ ತಾಂತ್ರಿಕ ಸಂಯೋಜಕ ಬಿ. ದೇವದಾಸ ಪೈ.
‘ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿದ ಪದಗಳು, ಭಾಷೆಯಲ್ಲಿ ಅತಿ ಹೆಚ್ಚು ಉಪಯೋಗಿಸುವ ಪದ ಯಾವುದು ಎಂಬುದನ್ನು ಅಧ್ಯಯನ ಮಾಡಲು ಕಾರ್ಪಸ್ ಸಹಕಾರಿ. ಆ್ಯಪ್‌ಗಳ ಮೂಲಕ ಭಾಷಾಂತರ ಮಾಡುವಾಗ, ಚಾಟ್ ಜಿಪಿಟಿಯಲ್ಲಿ ಪ್ರಬಂಧ ರೂಪುಗೊಳ್ಳಲು ಕಾರ್ಪಸ್‌ನಲ್ಲಿ ನೀಡುವ ಮಾಹಿತಿ ದಾಖಲೆಯಾಗಿ ಉಳಿಯುತ್ತದೆ’ ಎಂಬುದು ಅವರ ಅಭಿಪ್ರಾಯ.
‘ಭಾರತಕ್ಕೆ ಪೋರ್ಚುಗೀಸರು ಬರುವ ಪೂರ್ವದಲ್ಲಿ ಇದ್ದ ಕೊಂಕಣಿ ಇಲ್ಲಿನ ಸಾರಸ್ವತ ಸಮುದಾಯದಲ್ಲಿ ಈಗಲೂ ಬಳಕೆಯಲ್ಲಿದೆ. ಸಂಸ್ಕೃತ ಹಾಗೂ ಪ್ರಾಕೃತದಿಂದ ಬಂದ 500 ವರ್ಷಗಳ ಹಿಂದಿನ ಕೊಂಕಣಿ ಪದಗಳನ್ನು ಡಿಜಿಟಲ್‌ಗೆ ಅಳವಡಿಸುವ ಭಾಗವಾಗಿ, ಯೋಜನೆ ಕೈಗೆತ್ತಿಕೊಂಡಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲು ಯೋಚಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘100 ಪದಗಳ ಲೇಖನ’
ಕೊಂಕಣಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಸಾಹಿತ್ಯಾಸಕ್ತರನ್ನು ಒಳಗೊಂಡ ಆಯ್ದ 20 ಮಂದಿಗೆ ಹಲವು ಸುತ್ತಿನಲ್ಲಿ ತರಬೇತಿ ನೀಡಲಾಗಿದ್ದು, ಅವರು ಬೇರೆ ಬೇರೆ ಕ್ಷೇತ್ರಗಳ 100 ಪದಗಳ ಲೇಖನಗಳನ್ನು ಸಿದ್ಧಪಡಿಸಿ ಕೊಡುತ್ತಾರೆ. ಯುಜಿಸಿ ದಾಖಲಿಸಿದ ದೇವನಾಗರಿ ಲಿಪಿಯಲ್ಲಿ ಈ ಬರಹ ಇರುತ್ತದೆ. ಇಂಗ್ಲಿಷ್ ಭಾಷಾಂತರ ರೂಪ ಅದರ ಜೊತೆಗೆ ಇರುತ್ತದೆ. ಈ ಕಾರ್ಯಕ್ಕೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದು ದೇವದಾಸ್ ಪೈ ತಿಳಿಸಿದರು.
ಋಗ್ವೇದವನ್ನು ಕೊಂಕಣಿ ಭಾಷೆಗೆ ತರುವ ಕೆಲಸ ಗೋವಾದಲ್ಲಿ ನಡೆಯುತ್ತಿದ್ದು, ಪ್ರಥಮ ಅಧ್ಯಾಯ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದೆ.-ದೇವದಾಸ ಪೈ, ಕಾರ್ಪಸ್ ಯೋಜನೆಯ ಸಂಯೋಜಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.