ADVERTISEMENT

ಮಂಗಳೂರು | ಕೊರಗರಿಗೆ ನಿವೇಶನ ಹಂಚಿಕೆಗೆ ಮೀನಮೇಷ: ಆರೋಪ

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:12 IST
Last Updated 30 ಜುಲೈ 2024, 6:12 IST
ಪ್ರತಿಭಟನೆಯಲ್ಲಿ ಕೃಷ್ಣಪ್ಪ ಕೊಂಚಾಡಿ ಮಾತನಾಡಿದರು– ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಕೃಷ್ಣಪ್ಪ ಕೊಂಚಾಡಿ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ನಿರ್ವಸಿತ ಕೊರಗ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಪಾಲಿಕೆ ಅನಗತ್ಯ  ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಪಾಲಿಕೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಸಮಿತಿಯ ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ, ‘ಕೊರಗರಿಗೆ ನಿವೇಶನ ಮಂಜೂರು ಮಾಡುವಂತೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. 2023 ರಲ್ಲಿ ವಾಮಂಜೂರಿನಿಂದ ಪಾಲಿಕೆ ಕಚೇರಿಗೆ ಜಾಥಾ ನಡೆಸಿದೆವು. ನಮ್ಮನ್ನು ಬಂಧಿಸಿದರೂ ಜಗ್ಗಲಿಲ್ಲ. ಶೀಘ್ರವೇ ನಿವೇಶನ ಹಂಚಿಕೆ ಮಾಡುವ ಭರವಸೆಯನ್ನು ಪಾಲಿಕೆ ನೀಡಿತ್ತು. ಬಳಿಕ ಚುನಾವಣೆ ನೀತಿಸಂಹಿತೆ ನೆಪ ಹೇಳಿ ಮೀನಮೇಷ ಎಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕೊರಗ ಸಮುದಾಯದ ವಿಷಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ತಾತ್ಸಾರ ಮನೋಭಾವವನ್ನು ಪಾಲಿಕೆ ತಳೆದಿದೆ. ಈ ಪ್ರತಿಭಟನೆ ಬಗ್ಗೆ ತಿಂಗಳ ಹಿಂದೆ ನೋಟಿಸ್ ನೀಡಿದರೂ ಪ್ರತಿಕ್ರಯಿಸುವ ಸೌಜನ್ಯವನ್ನೂ ತೋರಿಲ್ಲ. ಹೋರಾಟ ಮಾಡಿದಾಗಲೆಲ್ಲ, ಕೊರಗ ಸಮುದಾಯಕ್ಕೆ ಮನೆ ನಿರ್ಮಿಸಲು ₹ 1.5 ಕೋಟಿ ಕಾಯ್ದಿರಿಸಿದ್ದೇವೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಪೊಳ್ಳು ಭರವಸೆಗಳನ್ನು ನಂಬುವ ಕಾಲ ಹೋಯಿತು. ನಮಗೆ ಜಮೀನಿನ ದಾಖಲೆ ಹಸ್ತಾಂತರಿಸಬೇಕು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಕುಡುಪು ಗ್ರಾಮದಲ್ಲಿ 8 ಎಕರೆ 94 ಸೆಂಟ್‌ ಜಮೀನನ್ನು ದಲಿತೋದ್ಧಾರಕ ಕುದ್ಮುಲ್‌ ರಂಗರಾಯರ  ಶಿಷ್ಯ ವೆಂಕೋಬರಾವ್ 1930ರಲ್ಲಿ ಕೊರಗ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ ದಾನ ಮಾಡಿದ್ದರು ಇನ್ನೂ ಆ ಜಮೀನು ಕೊರಗ ಸಮುದಾಯದವರಿಗೆ ಹಸ್ತಾಂತರ ಆಗಿಲ್ಲ. ಕೊರಗಜ್ಜ ಸೇವಾ ಟ್ರಸ್ಟ್‌ನ ಸತತ ಪ್ರಯತ್ನದಿಂದ 33 ಕೊರಗ ಕುಟುಂಬಗಳಿಗೆ ನಿವೇಶನ ವಿತರಿಸಲು ಪಾಲಿಕೆ 2018ರಲ್ಲಿ ನಿರ್ಣಯ ಅಂಗೀಕರಿಸಿದೆ. ಅದಿನ್ನೂ ಕಾರ್ಯರೂಪಕ್ಕೆ ಬಾರದಿರುವುದು ವಿಪರ್ಯಾಸ’ ಎಂದರು.

ಸಿಪಿಎಂ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ‘ಜನಶಕ್ತಿ ಎದುರು ಪಾಲಿಕೆ ಆಟ ನಡೆಯಲ್ಲ. ಕೊರಗರಿಗೆ ಮನೆ ನಿವೇಶನ ಹಂಚದಿದ್ದರೆ ಮೇಯರ್ ಹಾಗೂ ಆಯುಕ್ತರ ಕಚೇರಿಗೆ ನುಗ್ಗುತ್ತೇವೆ. ಬೇಕಿದ್ದರೆ ಹೋರಾಟಗಾರರನ್ನು ಜೈಲಿಗೆ ಹಾಕಿ. ಮನೆಯೇ ಇಲ್ಲದವರು, ಜೈಲಿಗೆ ಹಾಕಿದರೆ ಭಯಪಡುತ್ತಾರೆಯೇ’ ಎಂದು ಪ್ರಶ್ನಿಸಿದರು.

ಸಮಿತಿಯ ಮಂಗಳ ಜ್ಯೋತಿ ಘಟಕದ ಅಧ್ಯಕ್ಷ ಯೋಗೇಶ್ ಜಪ್ಪಿನಮೊಗರು , ರಾಜ್ಯ ಸಮಿತಿ ಸದಸ್ಯರಾದ ಶೇಖರ ವಾಮಂಜೂರು ಮತ್ತು ಕೃಷ್ಣ ಇನ್ನಾ  ಮಾತನಾಡಿದರು.
ಸಂಘಟನೆಯ ಪ್ರಮುಖರಾದ ಪುನೀತ್, ವಿಘ್ನೇಶ್, ರಶ್ಮಿ, ಮಂಜುಳಾ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.