ADVERTISEMENT

ಕೋಟೆಕಾರು ಬ್ಯಾಂಕ್‌ ದರೋಡೆ: ಸಭೆ ನಡೆಸಿ, ಶಸ್ತ್ರಾಸ್ತ್ರ ಬಚ್ಚಿಟ್ಟ ಆರೋಪಿಗಳು

ಕೆ.ಸಿ.ರೋಡ್ ದರೋಡೆ ಪ್ರಕರಣ: ಆರೋಪಿ ಮುರುಗಂಡಿ ಥೇವರ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 13:36 IST
Last Updated 1 ಫೆಬ್ರುವರಿ 2025, 13:36 IST
ಆರೋಪಿ ಮುರುಗಂಡಿ ಥೇವರ್‌ ಎಡಗಾಲಿಗೆ ಗುಂಡೇಟಿನಿಂದ ಗಾಯವಾಗಿದೆ
ಆರೋಪಿ ಮುರುಗಂಡಿ ಥೇವರ್‌ ಎಡಗಾಲಿಗೆ ಗುಂಡೇಟಿನಿಂದ ಗಾಯವಾಗಿದೆ   

ಉಳ್ಳಾಲ (ದಕ್ಷಿಣ ಕನ್ನಡ): ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆ ದರೋಡೆ ನಡೆಸುವುದಕ್ಕೂ ಮುನ್ನ ಪ್ರಮುಖ ಆರೋಪಿಗಳು ಕರ್ನಾಟಕ- ಕೇರಳ ಗಡಿಭಾಗದ ಅಜ್ಜಿನಡ್ಕದಲ್ಲಿ ಈ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು. ಅದೇ ಸ್ಥಳದಲ್ಲಿ ಶಸ್ತ್ರಾಸ್ತ್ರವನ್ನೂ ಅಡಗಿಸಿಟ್ಟಿದ್ದರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

‘ದರೋಡೆಗೆ ಹೇಗೆ ಸಂಚು ರೂಪಿಸಲಾಯಿತು ಎಂಬ ಬಗ್ಗೆ ಪ್ರಕರಣದ ಪ್ರಮುಖ ಆರೋಪಿ ಮುರುಗಂಡಿ ಥೇವರ್‌ ವಿಚಾರಣೆ ವೇಳೆ ವಿವರಿಸಿದ್ದ. ಬಂಧಿತ ಆರೋಪಿಗಳಾದ ಮುರುಗಂಡಿ ಥೇವರ್‌, ಯೋಸುವಾ ರಾಜೇಂದ್ರನ್‌, ತಲೆಮರೆಸಿಕೊಂಡಿರುವ ಶಶಿ ಥೇವರ್‌ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರು ಅಜ್ಜಿನಡ್ಕದ ಬ್ಯಾಂಕ್‌ ಒಂದರ ಬಳಿ  2024ರ ನವೆಂಬರ್‌ನಲ್ಲಿ ಒಮ್ಮೆ ಒಟ್ಟು ಸೇರಿ ದರೋಡೆ ನಡೆಸುವ ಬಗ್ಗೆ ಚರ್ಚಿಸಿದ್ದರು. ಆ ಸಭೆಯಲ್ಲಿ ಭಾಗವಹಿಸಿದ್ದ ಶಶಿ ಥೇವರ್‌, ಶಸ್ತ್ರಾಸ್ತ್ರವನ್ನೂ ತಂದಿದ್ದ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆಯಲ್ಲಿರುವ ಭದ್ರತಾ ಲೋಪಗಳ ಬಗ್ಗೆಯೂ ಚರ್ಚಿಸಿದ್ದ. ನಿರಾಯಾಸವಾಗಿ ದರೋಡೆ ನಡೆಸುವುದಕ್ಕೆ ಈ ಮಾಹಿತಿಗಳು ನೆರವಾಗಿದ್ದವು. ಶಶಿ ಥೇವರ್‌, ತಾನು ತಂದಿದ್ದ ಶಸ್ತ್ರಾಸ್ತ್ರವನ್ನು ಅಜ್ಜಿನಡ್ಕದಲ್ಲಿ ಸಮಾಲೋಚನೆ ನಡೆಸಿದ ಸ್ಥಳದಲ್ಲೇ ಅಡಗಿಸಿಟ್ಟಿದ್ದ’ ಎಂದು ಕಮಿಷನರ್‌ ಮಾಹಿತಿ ನೀಡಿದ್ದಾರೆ.

‘ಆರೋಪಿ ಮುರುಗಂಡಿ ನೀಡಿದ ಮಾಹಿತಿಯ ಪ್ರಕಾರ ಸ್ಥಳ ಮಹಜರು ಹಾಗೂ ಪಂಚನಾಮೆ ನಡೆಸಲು ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರು ಒಬ್ಬರು ಪಿಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ ಜತೆ ಅಜ್ಜಿನಡ್ಕಕ್ಕೆ ಶನಿವಾರ ತೆರಳಿದ್ದರು. ಅಲ್ಲಿ ಮುರುಗಂಡ ಥೇವರ್‌ ತನ್ನನ್ನು ಸರಪಳಿಯಲ್ಲಿ ಹಿಡಿದು ಕೊಂಡಿದ್ದ ಕಾನ್‌ಸ್ಟೆಬಲ್ ಮಂಜುನಾಥ್‌ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದ. ಕಾನ್‌ಸ್ಟೆಬಲ್ ಅವರ ಮರ್ಮಾಂಗಕ್ಕೆ ಒದ್ದು, ಸರಪಳಿಯನ್ನು ಅವರ ಕುತ್ತಿಗೆಗೆ ಸುತ್ತಿ, ಉಸಿರುಗಟ್ಟಿಸಿ ಸಾಯಿಸಿ‌ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕವೂ  ತಪ್ಪಿಸಿಕೊಳ್ಳಲು ಯತ್ನಿಸಿದ ಮುರುಗಂಡಿಯ ಕಾಲಿಗೆ ಬಾಲಕೃಷ್ಣ  ಗುಂಡು ಹಾರಿಸಿದ್ದರು’ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಈ ಬಗ್ಗೆ ಆರೋಪಿ ಮುರುಗಂಡಿ ಥೇವರ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಇನ್ನೊಬ್ಬ ಆರೋಪಿ  ಕಣ್ಣನ್ ಮಣಿಯನ್ನು ಸ್ಥಳ ಮಹಜರಿಗೆ 2025ರ ಜ. 21ರಂದು ಕರೆದೊಯ್ದಾಗ ಆತನ ಮೇಲೂ ಪೊಲೀಸರು ಗುಂಡು ಹಾರಿಸಿದ್ದರು.

‘ಕಣ್ಣನ್‌ ಮಣಿ ಸ್ಥಳದಲ್ಲಿ ಸಿಕ್ಕ ಬಿಯರ್‌ ಬಾಟಲಿಯನ್ನು ತುಂಡರಿಸಿ, ಪೊಲೀಸ್ ಸಿಬ್ಬಂದಿಗೆ ಇರಿದು, ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ’ ಎಂದು ಪೊಲೀಸರು ತಿಳಿಸಿದ್ದರು.

ಗಾಯಗೊಂಡ ಪೊಲೀಸ್ ಕಾನ್‌ಸ್ಟೆಬಲ್ ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.