ADVERTISEMENT

ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

ಸ್ಥಳ ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ?

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 2:54 IST
Last Updated 22 ಜನವರಿ 2025, 2:54 IST
   

ಉಳ್ಳಾಲ (ದಕ್ಷಿಣ ಕನ್ನಡ): ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆಯಲ್ಲಿ ಈಚೆಗೆ ನಡೆದ ದರೋಡೆ ಪ್ರಕರಣದ ಆರೋಪಿಯೊಬ್ಬ ಸ್ಥಳ ಮಹಜರಿನ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿ ಕೊಳ್ಳಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಮುಂಬೈ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ (36) ಗುಂಡೇಟು ತಗುಲಿದ ಆರೋಪಿ. ಬಲಗಾಲಿಗೆ ಗುಂಡೇಟು ತಗುಲಿರುವ ಆತನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

‘ಆರೋಪಿಗಳು ದರೋಡೆ ಬಗ್ಗೆ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ತಲಪಾಡಿಯ ಅಲಂಕಾರುಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಸಂಚು ರೂಪಿಸಿದ್ದರು. ಆ ಜಾಗದ ಮಹಜರಿಗಾಗಿ ಆರೋಪಿ ಕಣ್ಣನ್ ಮಣಿಯನ್ನು ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌ ಅವರು ಇತರ ಸಿಬ್ಬಂದಿ ಜೊತೆ ಸ್ಥಳಕ್ಕೆ ಕರೆದೊಯ್ದಿದ್ದರು. ಆರೋಪಿಯು ಈ ವೇಳೆ ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿ ನಿತಿನ್‌ ಹಾಗೂ ಸಿಸಿಬಿ ಸಿಬ್ಬಂದಿ ಆಂಜನಪ್ಪ ಅವರಿಗೆ ಸ್ಥಳ ದಲ್ಲಿದ್ದ ಬಿಯರ್ ಬಾಟಲಿಯೊಂದರಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.  ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರಿಗೆ ತುಂಡಾದ ಬಾಟಲಿಯಿಂದ ಇರಿಯಲು ಮುಂದಾಗಿದ್ದ. ಮಹಜರಿಗೆ ಉಳ್ಳಾಲ ಪೊಲೀಸರ ಜೊತೆಗೆ ತೆರಳಿದ್ದ ಸಿಸಿಬಿ ತಂಡ ಇನ್‌ಸ್ಪೆಕ್ಟರ್‌ ರಫೀಕ್‌ ಅವರು ಎಚ್ಚರಿಕೆ ನೀಡಿದರೂ, ಆರೋಪಿ ಕೇಳಲಿಲ್ಲ.  ಆಗ ರಫೀಕ್‌ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಘಟನೆಯಿಂದ ಇನ್‌ಸ್ಪೆಕ್ಟರ್‌ ಬಾಲಕೃಷ್ಣ, ಸಿಬ್ಬಂದಿ ನಿತಿನ್ ಹಾಗೂ ಆಂಜನಪ್ಪ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಯೆನೆಪೋ‌ಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಜಂಕ್ಷನ್ ಶಾಖೆಯಲ್ಲಿ ಜ.17ರಂದು ದರೋಡೆ ನಡೆದಿತ್ತು. ಈ ಪ್ರಕರಣ ಸಂಬಂಧ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮುಂಬೈನ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ (36), ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ಮುಂಬೈನ ದೊಂಬಿವಲಿ ವೆಸ್ಟ್‌ನ ಯೊಸುವಾ ರಾಜೇಂದ್ರನ್ (35) ಎಂಬುವರನ್ನು ಬಂಧಿಸಿದ್ದರು. ಬಂಧಿತರಿಂದ ಎರಡು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರ, ಚಿನ್ನಾಭರಣ ಮತ್ತು ನಗದು, ಕೃತ್ಯಕ್ಕೆ ಬಳಸಿದ್ದ ಮಹಾರಾಷ್ಟ್ರ ನೋಂದಣಿಯ ಫಿಯೆಟ್ ಕಾರನ್ನು ವಶಕ್ಕೆ ಪಡೆದಿದ್ದರು.

ಬೈಕ್‌ನಲ್ಲಿ ಲಿಫ್ಟ್‌: ರೈಲಿನ ಮಾಹಿತಿ ಕೇಳಿದ್ದ ಆರೋಪಿ

ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯಲ್ಲಿ ಒಬ್ಬಾತ ರಾಷ್ಟ್ರೀಯ ಹೆದ್ದಾರಿ ಬಳಿ ಕಾರಿನಿಂದ ಇಳಿದು, ಬೈಕಿನಲ್ಲಿ ಸಾಗಿದ್ದು ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿತ್ತು. ಆತನಿಗೆ ಲಿಫ್ಟ್‌ ನೀಡಿದ್ದ ವ್ಯಕ್ತಿಯಲ್ಲಿ ವಿಚಾರಿಸಿದಾಗ ‘ಆರೋಪಿ ರೈಲು ನಿಲ್ದಾಣ ಬಗ್ಗೆ ಹಿಂದಿ ಭಾಷೆಯಲ್ಲಿ ವಿಚಾರಿಸಿದ್ದ ಅಂಶ ಗೊತ್ತಾಗಿತ್ತು. ಪ್ರಕರಣದ ಒಬ್ಬ ಆರೋಪಿ ರೈಲಿನಲ್ಲಿ ಮುಂಬೈ ತಲುಪಿದ್ದು ಖಚಿತವಾಗಿತ್ತು. ಪ್ರಕರಣಕ್ಕೆ ಮುಂಬೈ ಗ್ಯಾಂಗಿನ ನಂಟಿರುವುದು ಆತನಿಂದಾಗಿಯೇ ತಿಳಿದುಬಂದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ತು ಮಂದಿಯ ತಂಡದಿಂದ ಕೃತ್ಯ?

‘ಈ ದರೋಡೆಯ ಬಗ್ಗೆ ಕೆ.ಸಿ.ರೋಡ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳಲ್ಲಿ ಐದು ಮಂದಿ ಇರುವುದು ಮಾತ್ರ ಸೆರೆಯಾಗಿದೆ. ಆದರೆ ಒಟ್ಟು 10  ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರಿಂದ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳು ದರೋಡೆ ಮಾಡಿದ ಎಲ್ಲ ಚಿನ್ನಾಭರಣಗಳು ಪೂರ್ಣಪ್ರಮಾಣದಲ್ಲಿ ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.