ADVERTISEMENT

ತಿಂದು ಸಾಯಿ ನಮಗೇನಂತೆ: ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ತಿರುಗೇಟು

ಗೋಮಾಂಸ ಕುರಿತು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 5:34 IST
Last Updated 12 ಜನವರಿ 2021, 5:34 IST
ಕೆ.ಎಸ್‌. ಈಶ್ವರಪ್ಪ ಹಾಗೂ ಸಿದ್ದರಾಮಯ್ಯ
ಕೆ.ಎಸ್‌. ಈಶ್ವರಪ್ಪ ಹಾಗೂ ಸಿದ್ದರಾಮಯ್ಯ    

ಮಂಗಳೂರು: ‘ರಾಜ್ಯದ ಶೇ 90ರಷ್ಟು ಜನರು ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನಾನು ಗೋಮಾಂಸ ತಿಂತೇನೆ ಎಂದು ಹೇಳುತ್ತಾರೆ. ತಿಂದು ಸಾಯಿ ನಮಗೇನಂತೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬಂಟ್ವಾಳದಲ್ಲಿ ನಡೆದ ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗೋಮಾಂಸ ತಿನ್ನುತ್ತೇನೆ. ಹನುಮ ಜಯಂತಿ ದಿನ ನಾಟಿಕೋಳಿ ತಿನ್ನುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾಂಗ್ರೆಸ್ಸಿಗರು ಇದನ್ನು ಖಂಡಿಸುವುದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದೆ’ ಎಂದರು.

‘ಮುದಿ ಹಸುವನ್ನು ಬಿಜೆಪಿಯವರ ಮನೆ ಮುಂದೆ ಬಿಡ್ತಾರಂತೆ. ಇವರ ತಾಯಿಗೆ ವಯಸ್ಸಾದಾಗ ಹೀಗೆ ಮಾತಾಡ್ತಾರಾ? ನಿಮ್ಮ ತಾಯಿಯೂ ನಮಗೆ ತಾಯಿ ಸಮಾನ. ಹೆಣ್ಣನ್ನು ತಾಯಿ ಎಂದು ಕರೆಯುವ ದೇಶ ಭಾರತ ಮಾತ್ರ’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

ಶ್ರೀಕೃಷ್ಣ ಮಂದಿರವನ್ನೂ ಕಟ್ಟುತ್ತೇವೆ: ‘ಇಂದು ರಾಮ ಮಂದಿರ ಕಟ್ಟುತ್ತೇವೆ. ಮುಂದೆ ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ಕಟ್ಟುತ್ತೇವೆ. ರಸ್ತೆ, ಚರಂಡಿ ನಿರ್ಮಾಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅದನ್ನೂ ಮಾಡಿಯೇ ಮಾಡುತ್ತೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.