ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಪ್ರೀಮಿಯಂ ಬಸ್‌ಗಳಲ್ಲಿ ಜಾರಿಗೊಳಿಸಿದ್ದ ‘ರೌಂಡ್ ಆಫ್’ ವ್ಯವಸ್ಥೆಯಡಿ ಪ್ರಯಾಣಿಕರ ಟಿಕೆಟ್ ದರದಿಂದ ₹ 1,57,52,210 ಸಂಗ್ರಹವಾಗಿದೆ. ಮಾಹಿತಿ ಹಕ್ಕಿನಡಿ ಕೆಎಸ್‌ಆರ್‌ಟಿಸಿಯಿಂದ ಪಡೆದ ವಿವರದಿಂದ ಈ ಅಂಶ ಗೊತ್ತಾಗಿದೆ.
ಬಸ್ ಪ್ರಯಾಣಿಕರಿಗೆ ಚಿಲ್ಲರೆ ನೀಡುವಾಗ ಉಂಟಾಗುವ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿಯು 2016ರ ಮಾರ್ಚ್ 3ರಂದು ‘ರೌಂಡ್ ಆಫ್’ ವ್ಯವಸ್ಥೆ ಕುರಿತು ಆದೇಶ ಹೊರಡಿಸಿತ್ತು. ಈ ವ್ಯವಸ್ಥೆಯು ಕೆಎಸ್‌ಆರ್‌ಟಿಸಿಯ ಪ್ರೀಮಿಯಂ ವಿಭಾಗಗಳಲ್ಲಿ (ಐರಾವತ, ರಾಜಹಂಸ, ವೈಭವ ಮತ್ತು ಇವಿ ಪವರ್ ಪ್ಲಸ್) 2016ರ ಏ.15ರಿಂದ ಜಾರಿಗೆ ಬಂದಿತ್ತು.
‘ಪ್ರಯಾಣ ದರ ₹51ರಿಂದ ₹54ರವರೆಗೆ ಇದ್ದರೆ ರೌಂಡ್ ಆಫ್ ಆಗಿ ₹50 ಪಡೆಯಬೇಕು, ₹55ರಿಂದ ₹59ರವರೆಗಿನ ಪ್ರಯಾಣ ದರ ಇದ್ದರೆ ಪ್ರಯಾಣಿಕರಿಂದ ₹60 ಪಡೆಯಬೇಕು. ಅವತಾರ್ ಕೌಂಟರ್ ಮತ್ತು ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳಿಗೂ ರೌಂಡಿಂಗ್ ಆಫ್ ವ್ಯವಸ್ಥೆಯನ್ನು ವಿಸ್ತರಿಸಬೇಕು. ಈ ವ್ಯವಸ್ಥೆಯಿಂದ ಉಂಟಾಗುವ ಮಿಗತೆ ಮತ್ತು ಕೊರತೆಗೆ ಸಂಬಂಧಿಸಿ ಲೆಕ್ಕಪತ್ರ ವಿಭಾಗವು ಪ್ರತ್ಯೇಕ ಖಾತೆ ತೆರೆಯಬೇಕು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಕೆಎಸ್‌ಆರ್‌ಟಿಸಿ ನೀಡಿರುವ ಮಾಹಿತಿಯಂತೆ ಮೈಸೂರು ಗ್ರಾಮಾಂತರ ವಿಭಾಗವು ಈ ವ್ಯವಸ್ಥೆಯಡಿ ಅತಿ ಹೆಚ್ಚು (₹55,56,971.20) ಆದಾಯ ಗಳಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗ (₹52,73,560) ಹಾಗೂ ಮಂಗಳೂರು ವಿಭಾಗ (₹18,21,165) ಆದಾಯ ಸಂಗ್ರಹದಲ್ಲಿ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ.
ಪುತ್ತೂರು ವಿಭಾಗ 2016ರಿಂದ 2025ರ ಏಪ್ರಿಲ್‌ವರೆಗೆ ಈ ವ್ಯವಸ್ಥೆಯಡಿ ₹125 ಆದಾಯ ಗಳಿಸಿದೆ. ಪುತ್ತೂರು ಡಿಪೊ ₹62 ಕೊರತೆ ತೋರಿಸುವ ಮೂಲಕ ವಿಭಾಗವು ಪ್ರಯಾಣಿಕ ಸ್ನೇಹಿ ಎಂಬುದನ್ನು ಬಿಂಬಿಸಿದೆ. ಚಿಕ್ಕಮಗಳೂರು ಡಿಪೊ ಅತಿ ಹೆಚ್ಚು ಆದಾಯ ಕೊರತೆ ಎದುರಿಸುತ್ತಿದ್ದು, ಈ ವ್ಯವಸ್ಥೆಯಿಂದ ₹19,624 ಆದಾಯವನ್ನು ಕಳೆದುಕೊಂಡಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.
‘ಪ್ರಯಾಣ ದರ ₹35.40 ಇದ್ದಾಗ ₹35 ಪಡೆಯುವುದು ಸಮಂಜಸ. ಆದರೆ, ದರ ₹36 ಇದ್ದಾಗ ₹40 ಪಡೆಯುವುದು ಸರಿಯಲ್ಲ. ಇದು ಶೇ 14.3ರಷ್ಟು ಹೆಚ್ಚು ಪಡೆದಂತಾಗುತ್ತದೆ. ಇದರಿಂದ ಪ್ರಯಾಣಿಕರನ್ನು ಶೋಷಣೆ ಮಾಡಿದಂತಾಗಿದೆ’ ಎಂದು ರೌಂಡಿಂಗ್ ಆಫ್ ವ್ಯವಸ್ಥೆ ವಿರುದ್ಧ ಮಂಗಳೂರಿನ ಕೆಎಸ್‌ಆರ್‌ಟಿಸಿಗೆ ನಿರಂತರವಾಗಿ ದೂರು ಸಲ್ಲಿಸಿದ್ದ ಬಿ.ರಾಧೇಶ್ಯಾಮ್ ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ವ್ಯಕ್ತವಾದ ಟೀಕೆ, ಆಕ್ಷೇಪ ಗಮನಿಸಿ ಕೆಎಸ್‌ಆರ್‌ಟಿಸಿಯು ಶುಕ್ರವಾರ ಈ ವ್ಯವಸ್ಥೆಯನ್ನು ಹಿಂಪಡೆದಿದೆ. ರೈಲ್ವೆ ಇಲಾಖೆಯು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲ್ವೆ ಇಲಾಖೆಯನ್ನು ಖಂಡಿಸಿದ್ದರು. ಆದರೆ, ಕೆಎಸ್‌ಆರ್‌ಟಿಸಿಯ ರೌಂಡ್ ಆಫ್ ನೀತಿಯಿಂದ ಅನ್ಯಾಯವಾಗುತ್ತಿದ್ದುದು ಅವರಿಗೆ ಕಾಣುತ್ತಿರಲಿಲ್ಲವೇ?, ಕೆಎಸ್‌ಆರ್‌ಟಿಸಿಯು ಪ್ರಯಾಣಿಕರನ್ನು ಹಗಲು ದರೋಡೆ ಮಾಡುತ್ತಿದ್ದುದನ್ನು ಪ್ರತಿಭಟಿಸಲು ವಿರೋಧ ಪಕ್ಷವಾದ ಬಿಜೆಪಿಯೂ ನಿರ್ಲಕ್ಷ್ಯ ವಹಿಸಿತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.