ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಪಿಲಿ ಪರ್ಬ’ ಸ್ಪರ್ಧೆಯಲ್ಲಿ ಮಂಜೇಶ್ವರದ ಶಿವಶಕ್ತಿ ಟೈಗರ್ಸ್ ತಂಡದವರು ಹುಲಿವೇಷ ಕುಣಿತ ಪ್ರದರ್ಶಿಸಿದರು
ಪ್ರಜಾವಾಣಿ ಚಿತ್ರ
ಮಂಗಳೂರು: ತಾಸೆಯ ಲಯಬದ್ಧ ಪೆಟ್ಟುಗಳಿಗೆ ಅನುಗುಣವಾಗಿ ಕರಿ ಹುಲಿ, ಮರಿ ಹುಲಿ, ತಾಯಿ ಹುಲಿ, ಪಟ್ಟೆ ಹುಲಿಗಳ ಮನಮೋಹಕ ಕುಣಿತ ಪ್ರೇಕ್ಷಕರ ಮನಸೂರೆಗೊಂಡಿತು. ಹುಲಿವೇಷಧಾರಿಗಳು ವೇದಿಕೆಯಲ್ಲೇ ಆಳೆತ್ತರಕ್ಕೆ ನೆಗೆದು, ಕರಾರುವಕ್ಕಾಗಿ ನೆಲೆಯಾಗುತ್ತಾ ಪ್ರದರ್ಶಿಸಿದ ಪಟ್ಟುಗಳು ನೋಡುಗರನ್ನು ರೋಮಾಂಚನಗೊಳಿಸಿದವು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ ‘ಕುಡ್ಲ ಪಿಲಿ ಪರ್ಬ’ ಹುಲಿ ವೇಷ ಕುಣಿತ ಸ್ಪರ್ಧೆ ದಸರಾ ಮಹೋತ್ಸವಕ್ಕೆ ವಿಶೇಷ ಮೆರುಗು ತುಂಬಿತು.
ಮೆರವಣಿಗೆ ಚಂಡೆ, ತಾಸೆ ವಾದ್ಯಗಳ ಹಿಮ್ಮೇಳದೊಂದಿಗೆ ವೇದಿಕೆಯನ್ನೇರಿಸಿದ ಹುಲಿವೇಷಧಾರಿಗಳ ವಿವಿಧ ತಂಡಗಳು ಹುಲಿ ಕುಣಿತದ ನಾನಾ ಪಟ್ಟುಗಳನ್ನು 20 ನಿಮಿಷ ಪ್ರದರ್ಶಿಸಿದವು. ಪ್ರತಿ ತಂಡದ ಒಬ್ಬ ವೇಷಧಾರಿ 38 ಕೆ.ಜಿ. ಭಾರದ ಅಕ್ಕಿಮುಡಿಯನ್ನು ಬಾಯಿಯಲ್ಲಿ ಕಚ್ಚಿ ಹಿಮ್ಮುಳವಾಗಿ ಎಸೆಯುವ ಸಾಹಸ ಪ್ರದರ್ಶಿಸಿದರು. ಪ್ರತಿ ತಂಡದಲ್ಲೂ ಗರಿಷ್ಠ 15 ಹುಲಿ ವೇಷಧಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕುಣಿತದ ಸಾಂಪ್ರದಾಯಿಕ ಅಂಶಕ್ಕೆ, ಬಣ್ಣಗಾರಿಕೆ ಮಹತ್ವ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.
ಪಿಲಿ ಪರ್ಬವನ್ನು ಉದ್ಘಾಟಿಸಿದ ಸಂಸದ ಕ್ಯಾ ಬ್ರಿಜೇಶ್ ಚೌಟ, ‘ಪಿಲಿ ವೇಷ, ಯಕ್ಷಗಾನ, ಕಂಬಳದಂತಹ ಈ ನೆಲದ ಪರಂಪರೆಯನ್ನು ಇಂದಿನ ಪೀಳಿಗೆಯವರು ಮುಂದುವರಿಸುತ್ತಾರೆಯೇ ಎಂಬ ಸಂದೇಹವಿತ್ತು. ಈಗಿನ ಯುವಜನರು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದನ್ನು 15 ವರ್ಷಗಳಿಂದ ಈಚೆಗೆ ನೋಡುತ್ತಿದ್ದೇವೆ. ಅಷ್ಟೇ ಅಲ್ಲ, ಈಗಿನ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಪರಂಪರೆಗೆ ವಿಶೇಷ ಆಯಾಮ ನೀಡುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ’ ಎಂದರು.
‘ನಮ್ಮ ಕುಡ್ಲ ವಿಶೇಷ ಸಂಸ್ಕೃತಿಯನ್ನು ಹೊಂದಿರುವ ಶ್ರೇಷ್ಠ ಭೂಪ್ರದೇಶ. ದಸರಾ ಸಂದರ್ಭದಲ್ಲಿ ಇಲ್ಲಿನ ಆಚರಣೆಗಳಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಹುಲಿವೇಷ ಕುಣಿತವನ್ನು ಶ್ರದ್ಧೆ ಭಕ್ತಿಯಿಂದ ಮುಂದುವರಿಸಬೇಕು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, 'ವಿಭಿನ್ನ ಕುಣಿತಗಳನ್ನು ಪ್ರಸ್ತುತಿಪಡಿಸುವ ಹುಲಿವೇಷ ಕರಾವಳಿ ರಂಗುರಂಗಿನ ಆಚರಣೆಗಳಲ್ಲಿ ಒಂದು. ಪಿಲಿ ಪರ್ಬದ ಮುಖಾತರ ಹುಲಿವೇಷ ಕಲಾವಿದರಿಗೆ ಪ್ರೊತ್ಸಾಹ ಸಿಗುತ್ತಿದೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, 'ಗಣೇಶ ಚತುರ್ಥಿ, ದಸರಾ, ದೀಪಾವಳಿ ಸಂದರ್ಭಗಳಲ್ಲಿ ಹುಲಿವೇಷಗಳನ್ನು 70 ವರ್ಷಗಳಿಂದಲೂ ನೋಡುತ್ತಿದ್ದೇನೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ’ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್, ‘ನಾಲ್ಕು ವರ್ಷಗಳಿಂದ ಪಿಲಿ ಪರ್ಬವನ್ನು ಆಯೋಜಿಸುತ್ತಿದ್ದೇವೆ. ಪ್ರತಿ ವರ್ಷವೂ ಕೆಲವೊಂದು ಮಾರ್ಪಾಡುಗಳೊಂದಿಗೆ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಈ ವರ್ಷ 10 ತಂಡಗಳು ಭಾಗವಹಿಸಿವೆ’ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, 'ತುಳು ಪರಂಪರೆಯ ವೈಭವವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭವಿದು’ ಎಂದರು.
ಕುಡ್ಲಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪಾಂಡೇಶ್ವರ ಭಾಗವಹಿಸಿದ್ದರು. ಕದ್ರಿ ನವನೀತ ಶೆಟ್ಟಿ, ಕೆ.ಕೆ.ಪೇಜಾವರ, ವೆಂಕಟೇಶ ಭಟ್, ರೋಹನ್ ತೊಕ್ಕೊಟ್ಟು, ಬಜಿಲಕೇರಿ ಕಮಲಾಕ್ಷ, ನವೀನ್ ಕುಮಾರ್ ಮೊದಲಾದವರು ತೀರ್ಪುಗಾರಾಗಿದ್ದರು. ವಿ.ಜೆ.ಮಧುರಾಜ್ ಹಾಗೂ ಅಭಿಷೇಕ್ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.