ADVERTISEMENT

‘ಕುಡ್ಲಂಗಿಪ್ಪ ಕುಂದಾಪ್ರದವ್ರ’ ಸಂಭ್ರಮ

ಗ್ರಾಮೀಣ ಕ್ರೀಡೆಗಳ ರೋಮಾಂಚನ; ಮುದ ನೀಡಿದ ಹೆಂಗ್ಸ್ರ್‌ ಪಂಚೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 5:10 IST
Last Updated 12 ಆಗಸ್ಟ್ 2024, 5:10 IST
ಕುಂದಾಪ್ರ ಕನ್ನಡ ಹಬ್ಬದಲ್ಲಿ ಮುದ ನೀಡಿದ ಗ್ರಾಮೀಣ ಕ್ರೀಡೆ
ಕುಂದಾಪ್ರ ಕನ್ನಡ ಹಬ್ಬದಲ್ಲಿ ಮುದ ನೀಡಿದ ಗ್ರಾಮೀಣ ಕ್ರೀಡೆ   

ಮಂಗಳೂರು: ಹಗ್ಗಜಗ್ಗಾಟ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಜಿದ್ದಾಜಿದ್ದಿಯ ಹೋರಾಟದ ರೋಮಾಂಚನ, ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಖುಷಿ, ಹೆಂಗ್ಸ್ರ್‌ ಪಂಚೇತಿ ಮತ್ತಿತರ ಹಾಸ್ಯಭರಿತ ಗೋಷ್ಠಿಗಳ ಕಚಗುಳಿ, ಎಲ್ಲೆಲ್ಲೂ ಕುಂದಾಪ್ರ ಕನ್ನಡದ ರಸಗವಳ...

ಕುಡ್ಲಂಗಿಪ್ಪ ಕುಂದಾಪ್ರದವ್ರ್ (ಮಂಗಳೂರಿನಲ್ಲಿರುವ ಕುಂದಾಪುರದವರು) ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಒಂದು ಪ್ರದೇಶದ ವಿಶಿಷ್ಟ ಭಾಷೆ, ಸಂಸ್ಕೃತಿಯನ್ನು ಅನಾವರಣಗೊಳಿಸಿತು. 

ಇದ್ ಭಾಷಿ ಅಲ್ಲ, ಬದ್ಕ್‌ ಎಂಬ ಘೋಷವಾಕ್ಯದಡಿ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆ, ಕುಂದಾಪುರದ ಆಹಾರ ಇತ್ಯಾದಿ ಇತ್ತು. ‘ಆಸಾಡಿ ಒಡ್ರಂಗ್ ಒಂದಿನ ಒಟ್ಟಾಪ’ ಎಂದು ಹೇಳುತ್ತಲೇ ಒಟ್ಟುಗೂಡಿದ ಕುಂದಾಪುರದವರು ಮಳಿ ಅಂದ್ರೆ, ಒಗಿ ಎತ್ತಲೇ ಎಂದು ಹೇಳಿದ್ದರಿಂದಲೋ ಏನೋ ಮಳೆ ಬಿಡುವು ಕೊಟ್ಟಿತ್ತು. ಮೈದಾನದಲ್ಲಿ ಆಟೋಟ ಮುಗಿದ ನಂತರ ಒಳಗೆ ಸಾಂಸ್ಕೃತಿಕ–ಹಾಸ್ಯ ವೈಭವ ಇತ್ತು. ‘ಹೆಂಗ್ಸ್ರ್‌ ಪಂಚೇತಿ’ಗಾಗಿ ಕಟ್ಟೆ ಮೇಲೆ ಕುಳಿತ ಮೂವರು ಪುರುಷರು ಮಾತುಕತೆಯ ಮೂಲಕ ನಗೆಗಡಲು ಉಕ್ಕಿಸಿದರು. 

ADVERTISEMENT

ಬೆಳಿಗ್ಗೆ ಹೆಸ್ರ್‌ ಬಾಯ್ರ್‌, ಉದ್ದಿನ ಇಡ್ಲಿ, ಉದ್ದಿನ ವಡಿ ಚಟ್ನಿ ಚಿಕ್ಕು ಶೀರಾ ಮತ್ತು ಚಹಾ ಸೇವಿಸಿ ಆರಂಭಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ಮಧ್ಯಾಹ್ನ ಕೊಚ್ಚಕ್ಕಿ ಗಂಜಿ, ಉಪ್ಪಿನ್ನುಡಿ, ಮಾವಿನಕಾಯಿ ಚಟ್ನಿ, ಕೋಳಿ ತಾಳ್ಲ್, ಸುವರ್ಣಗಡ್ಡೆ ಸುಕ್ಕ ಇತ್ಯಾದಿ ಸವಿದರು. ಬಯ್ಯಾಪತಿಗೆ (ಸಂಜೆ) ಸುಕ್ಕಿನುಂಡೆ, ಚಟ್ಟಂಬಡೆ, ಚಹಾ, ಕಾಫಿ ಇತ್ತು. ರಾತ್ರಿಯೂ ಭರ್ಜರಿ ಊಟ ಇತ್ತು. ಕೋಳಿ ಗಸಿ, ಹಾಗಲ್ಕಾಯಿ, ಆಮ್ಟಿಕಾಯಿ ಗೊಜ್ಜು ವಿಶೇಷವಾಗಿತ್ತು.

ಕಾರ್ಯಕ್ರಮದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಘಟಕ ಗೋಪಾಲಕೃಷ್ಣ ಶೆಟ್ಟಿ ವಾಟ್ಸ್‌ ಆ್ಯಪ್ ಗುಂಪಿನ ಮೂಲಕ ಆರಂಭಗೊಂಡ ಮಂಗಳೂರಿನಲ್ಲಿರುವ ಕುಂದಾಪುರದವರ ಬಳಗ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವಿವಿಧ ಕಾರ್ಯಗಳಿಂದ ಕುಂದಾಪ್ರದಿಂದ ಬಂದಿರುವ ನಮಗೆ ತುಳುನಾಡು ಅನ್ನ ನೀಡುತ್ತಿದೆ’ ಎಂದರು.

‘ಗುಂಪಿನಲ್ಲಿರುವವರು 2019ರಲ್ಲಿ ಬೆಳ್ತಂಗಡಿ ತಾಲ್ಲೂಕಿನ ನೆರೆ ಪರಿಹಾರಕ್ಕೆ ₹6 ಲಕ್ಷ ಮೊತ್ತ ಮತ್ತು ವಸ್ತುಗಳನ್ನು ಸಂಗ್ರಹಿಸಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ. ರಕ್ತದಾನದಲ್ಲೂ ಗುಂಪಿನವರು ಮುಂಪಕ್ತಿಯಲ್ಲಿದ್ದಾರೆ. ವಾಟ್ಸ್ ಆ್ಯಪ್‌ ಗುಂಪಿನಲ್ಲಿ 600 ಮಂದಿ ಇದ್ದಾರೆ’ ಎಂದು ಅವರು ತಿಳಿಸಿದರು.

ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಗ್ಗಜಗ್ಗಾಟದ ರೋಮಾಂಚನ
ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಾಸ್ಯಭರಿತ ನೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.