ಮಂಗಳೂರು: ಸಾಮಾಜಿಕ ಸುಧಾರಣೆಯ ಹರಿಕಾರ ಕುದ್ಮುಲ್ ರಂಗರಾವ್ ಜಯಂತಿ ಅಂಗವಾಗಿ ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಅವರ ಸ್ಮಾರಕಕ್ಕೆ ಭಾನುವಾರ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಬಿಜೆಪಿಯ ಮಂಗಳೂರು ನಗರ ದಕ್ಷಿಣದ ವತಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್, ‘ಕುದ್ಮುಲ್ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ಮಾನವತಾವಾದಿ. ದಲಿತರೂ ಸ್ವಾಭಿಮಾನ, ಆತ್ಮಗೌರವದಿಂದ ಉನ್ನತ ಶಿಕ್ಷಣ ಪಡೆದು ಸಮಾಜದ ಮುನ್ನಲೆಗೆ ಬರಬೇಕೆಂದು ತೀವ್ರ ಕಾಳಜಿ ವಹಿಸಿದ್ದರು. ಜನರ ವಿರೋಧದ ನಡುವೆಯೂ ವಿಶೇಷ ಶಾಲೆಗಳನ್ನು ಆರಂಭಿಸಿದರು. ಅಸ್ಪೃಶ್ಯತೆ ಹಾಗೂ ಶೋಷಣೆಯ ವಿರುದ್ಧ ಹೋರಾಡಿದ ಅವರನ್ನು ಮಹಾತ್ಮ ಗಾಂಧೀಜಿ ಕೂಡ ತಮ್ಮ ಗುರು ಎಂದು ಹೇಳಿಕೊಂಡಿದ್ದರು’ ಎಂದರು.
‘ಕುದ್ಮುಲ್ ರಂಗರಾವ್ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಅವರ ಸಮಾಧಿಯನ್ನು ₹ 3.5 ಕೋಟಿ ಮೊತ್ತದಲ್ಲಿ ಉನ್ನತೀಕರಿಸಲು ಶಿಲಾನ್ಯಾಸ ನೆರವೇರಿಸಲಾಗಿತ್ತು. ಸರ್ಕಾರ ಅದಕ್ಕೂ ತಡೆ ನೀಡಿದೆ’ ಎಂದು ಆರೋಪಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಆರ್ ಹೃದಯನಾಥ್, ಉಪಾಧ್ಯಕ್ಷರಾದ ಶಾಮ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡ, ಉಪನ್ಯಾಸಕ ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಮನೋಜ್ ಕುಮಾರ್, ಭರತ್ ಕುಮಾರ್, ಮೋಹನ್ ಪೂಜಾರಿ, ಅಶ್ವಿತ್ ಕೊಟ್ಟಾರಿ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.