
ಉಜಿರೆ/ಬೆಳ್ತಂಗಡಿ : ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಜಮೀನು ಒತ್ತುವರಿಯನ್ನು ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದ್ದಾರೆ. ತೆಂಗು, ಅಡಿಕೆ ಹಾಗೂ ಬಾಳೆ ಕೃಷಿಯನ್ನು ತೆರವುಗೊಳಿಸಿ, ಅಲ್ಲಿ ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು, ಅರಣ್ಯ ಇಲಾಖೆಯ ಫಲಕ ಅಳವಡಿಸಿದ್ದಾರೆ. 50 ವರ್ಷಗಳಿಂದ ನೆಲೆಸಿದ್ದ ಪಿ.ಟಿ. ಜೋಸೆಫ್ ಕುಟುಂಬ ಇದರಿಂದಾಗಿ ಬೀದಿಪಾಲಾಗಿದೆ.
ಅರಸಿನಮಕ್ಕಿ ಪಿ.ಟಿ ಜೋಸೆಫ್ ಕುಟುಂಬ 1970ರಿಂದ ಮಲವಂತಿಗೆಯಲ್ಲಿ ನೆಲೆಸಿದೆ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಅವರ ಕುಟುಂಬಕ್ಕೆ 1997ರಲ್ಲಿ 4.94 ಎಕರೆ ಜಮೀನು ಮಂಜೂರಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ, 2004ರಲ್ಲಿ ಅವರ ಹಕ್ಕುಪತ್ರವನ್ನು ರದ್ದುಪಡಿಸಲಾಗಿತ್ತು. ಆ ಜಾಗವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯು 2014ರಲ್ಲಿ ಆ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿತ್ತು. ಅದರ ವಿರುದ್ದ ಕುಟುಂಬದವರು ಮೇಲ್ಮನವಿ ಸಲ್ಲಿಸಿದ್ದು, ಅದು ತಿರಸ್ಕಾರಗೊಂಡಿತ್ತು. ಆ ಜಾಗವನ್ನು ಅ. 30ರ ಒಳಗೆ ತೆರವುಗೊಳಿಸುವಂತೆ ಅರಣ್ಯ ಇಲಾಖೆಯು ಅ.16 ರಂದು ಅಂತಿಮ ನೋಟೀಸ್ ಜಾರಿ ಮಾಡಿತ್ತು.
ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಶುಕ್ರವಾರ ಸ್ಥಳಕ್ಕೆ ತೆರಳಿದ್ದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ವಿ. ನೇತೃತ್ವದ ತಂಡ ಒತ್ತುವರಿ ತೆರವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಅವರ ಮನೆಯನ್ನು ನಾಶಪಡಿಸಲಾಗಿದೆ. ಸುಮಾರು 2 ಎಕರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದೆ.
'ಮೂರು ವರ್ಷದವನಿದ್ದಾಗ ನಮ್ಮ ಕುಟುಂಬ ಇಲ್ಲಿಗೆ ಬಂದು ನೆಲೆಸಿದೆ. ತಂದೆಯ ಹೆಸರಿನಲ್ಲಿ ಹಕ್ಕುಪತ್ರವೂ ಮಂಜೂರಾಗಿತ್ತು. ಈ ಕೃಷಿ ಭೂಮಿಯನ್ನೇ ನಂಬಿ ಬದುಕನ್ನು ನಡೆಸುತ್ತಿದ್ದೆವು. ನಮ್ಮ ಕುಟುಂಬ ಏಕಾಏಕಿ ಬೀದಿಗೆ ಬಿದ್ದಿದೆ. ಪತ್ನಿ ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು ಎಂದೇ ತಿಳಿದಿಲ್ಲ. ನಮಗೆ ಬೇರೆ ಮನೆಯಾಗಲಿ ಜಮೀನಾಗಲಿ ಇಲ್ಲ’ ಎಂದು ಜೋಸೆಫ್ ಅಳಲು ತೋಡಿಕೊಂಡಿದ್ದಾರೆ.
‘ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದ ಪಿ.ಟಿ.ಜೋಸೆಫ್ ಕುಟುಂಬಕ್ಕೆ ಇಲಾಖೆಯು 2018ರಿಂದಲೇ ನೋಟಿಸ್ ನೀಡುತ್ತಿದೆ. ಅನಧಿಕೃತವಾಗಿ ಮಂಜೂರಾಗಿದ್ದ ಜಮೀನಿನ ಹಕ್ಕುಪತ್ರವನ್ನು ಜೋಸೆಫ್ ಅವರ ತಂದೆಯವರ ಕಾಲದಲ್ಲೇ ಉಪವಿಭಾಗಾಧಿಕಾರಿಯವರು ರದ್ದುಪಡಿಸಿದ್ದರು. ಹಾಗಾಗಿ ಅ.16ರಂದು ಅವರ ಕುಟುಂಬಕ್ಕೆ ಅಂತಿಮ ನೋಟಿಸ್ ಜಾರಿ ಮಾಡಿದ್ದೆವು. ಆ ಬಳಿಕವೂ ಇಲಾಖೆಯ ಸಿಬ್ಬಂದಿ ಅವರ ಮನೆಗೆ ತೆರಳಿ ಒತ್ತುವರಿಯನ್ನು ಸ್ವಯಂ ತೆರವುಗೊಳಿಸುವಂತೆ ತಿಳಿಸಿದ್ದಾರೆ. ಕುಟುಂಬದವರು ಅವರಾಗಿ ಮನೆ ತೆರವು ಮಾಡಿದ ಬಳಿಕವಷ್ಟೇ, ಆ ಪ್ರದೇಶದಲ್ಲಿದ್ದ ಅಡಿಕೆ, ತೆಂಗು ಹಾಗೂ ಬಾಳೆ ತೋಟವನ್ನು ತೆರವು ಮಾಡಿ ಸ್ಥಳೀಯ ಪ್ರಭೇದದ ಗಿಡಗಳನ್ನು ನೆಡಲಾಗಿದೆ’ ಎಂದು ಶರ್ಮಿಷ್ಠಾ ಮಾಹಿತಿ ನೀಡಿದರು.
‘ಪರಿಹಾರ ನೀಡದೇ ತೆರವು ಖಂಡನೀಯ’
‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದೊಳಗಿಂದ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದ ರಾಜ್ಯ ಸರ್ಕಾರ ಈಗ ಬಲವಂತದ ಒಕ್ಕಲೆಬ್ಬಿಸುವಿಕೆಯ ಕಾರ್ಯಕ್ಕೆ ಮುಂದಾಗಿದೆ. ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದಾಗಲೇ ಮಲೆನಾಡಿನಲ್ಲಿ ನಕ್ಸಲ್ ಸಮಸ್ಯೆ ಆರಂಭವಾಗಿತ್ತು. ಇದೀಗ ನಕ್ಸಲರ ಶರಣಾಗತಿ ಬಳಿಕ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮತ್ತೆ ಮುಂದಾಗಿರುವುದು ಖಂಡನೀಯ. ಜೋಸೆಫ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಒತ್ತಾಯಿಸಿದ್ದಾರೆ.