ADVERTISEMENT

ಕುದ್ರೋಳಿ | ಮಕ್ಕಳ ದಸರಾ; ಅಸಾಮಾನ್ಯ ನಾರಿ ಸನ್ಮಾನ

ಕುದ್ರೋಳಿ ದಸರಾ ಮಹೋತ್ಸವದಲ್ಲಿ ‘ಕಿನ್ನಿಪಿಲಿ’ ಕುಣಿತ; ರುದ್ರತಾಂಡವಕ್ಕೆ ₹ 1 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:20 IST
Last Updated 26 ಆಗಸ್ಟ್ 2025, 5:20 IST
ಮಂಗಳೂರಿನ ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವದ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಪದ್ಮರಾಜ ಆರ್, ಜಯರಾಜ್ ಎಚ್ ಸೋಮಸುಂದರಂ, ಮಾಧವ ಸುವರ್ಣ, ದೇವೇಂದ್ರ ಪೂಜಾರಿ, ಬಿ.ಜಿ ಸುವರ್ಣ, ಚಂದನ್ ದಾಸ್ ಪಾಲ್ಗೊಂಡಿದ್ದರು
ಮಂಗಳೂರಿನ ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವದ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಪದ್ಮರಾಜ ಆರ್, ಜಯರಾಜ್ ಎಚ್ ಸೋಮಸುಂದರಂ, ಮಾಧವ ಸುವರ್ಣ, ದೇವೇಂದ್ರ ಪೂಜಾರಿ, ಬಿ.ಜಿ ಸುವರ್ಣ, ಚಂದನ್ ದಾಸ್ ಪಾಲ್ಗೊಂಡಿದ್ದರು    

ಮಂಗಳೂರು: ನಗರದ ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಈ ಬಾರಿ ಕಿನ್ನಿ ಪಿಲಿ (ಮರಿ ಹುಲಿ) ಸ್ಪರ್ಧೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 4 ಗಂಟೆಗೇ ಆರಂಭವಾಗಲಿವೆ. ಸಾಹಿತ್ಯ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ.

ಒಂದು ದಿನವನ್ನು ಮಕ್ಕಳ ಕಾರ್ಯಕ್ರಮಗಳಿಗೆ ಮೀಸಲಿಡಲಾಗುವುದು. ನಾಲ್ಕು ವಯಸ್ಸಿನ ಒಳಗಿನವರು ಮತ್ತು 4ರಿಂದ 7 ವಯಸ್ಸಿನ ವರೆಗಿನವರು ಎಂಬ ವಿಭಾಗಗಳಲ್ಲಿ ಮಕ್ಕಳ ಹುಲಿವೇಷ ಸ್ಪರ್ಧೆ ನಡೆಯಲಿದೆ. ಬಹುಭಾಷಾ ಕವಿಗೋಷ್ಠಿ ಮತ್ತು ತುಳು ಕವಿಗೋಷ್ಠಿ ಒಂದೇ ದಿನ ನಡೆಯಲಿದೆ. ಸಾಧನೆ ಮತ್ತು ಸೇವೆಯಲ್ಲಿ ಆಶಾಕಿರಣವಾಗಿರುವ, ಎಲೆಮರೆ ಕಾಯಿಯಂತಿರುವ ಮಹಿಳೆಯರನ್ನು ಸನ್ಮಾನಿಸಲು ಗುರುತಿಸಲಾಗುತ್ತಿದೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನೂ ಗೌರವಿಸಲಾಗುವುದು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ ಆರ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು 800 ಕಲಾವಿದರು ಮತ್ತು 31 ತಂಡಗಳನ್ನು ಆಹ್ವಾನಿಸಲಾಗುವುದು. ಜಾನಪದ ಕಲಾಪ್ರಕಾರಗಳ ಜೊತೆಯಲ್ಲಿ ಭರತನಾಟ್ಯ, ವೀಣಾ ವಾದನ, ಹರಿಕಥೆ, ತಾಳಮದ್ದಳೆ, ಯಕ್ಷಗಾನ, ಪುಂಡು ವೇಷ ವೈಭವ, ನೃತ್ಯ ರೂಪಕ, ಜಾದು ಪ್ರದರ್ಶನ, ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್‌ಡಿಎಂ ಕಲಾ ವೈಭವ ಇತ್ಯಾದಿ ಇರುತ್ತದೆ.

ADVERTISEMENT

ಕಲಾ ಸಾಹಿತ್ಯ ಸ್ಪರ್ಧೆಗಳು ನಡೆಯಲಿದ್ದು ರುದ್ರ ತಾಂಡವ ಭಕ್ತಿಪ್ರಧಾನ ನೃತ್ಯ ಸ್ಪರ್ಧೆಯಲ್ಲಿ ಒಟ್ಟು ₹ 1 ಲಕ್ಷ ಬಹುಮಾನ ನೀಡಲಾಗುವುದು. ಭಕ್ತಿಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆ ಇದ್ದು ಕಿನ್ನಿಪಿಲಿ ಸ್ಪರ್ಧೆಯಲ್ಲೂ ನಗದು ಬಹುಮಾನ ಸಿಗಲಿದೆ ಎಂದು ಅವರು ವಿವರಿಸಿದರು.

ಸಮಿತಿ ಅಧ್ಯಕ್ಷ ಜಯರಾಜ್ ಎಚ್ ಸೋಮಸುಂದರಂ, ಪ್ರಮುಖರಾದ ಮಾಧವ ಸುವರ್ಣ, ದೇವೇಂದ್ರ ಪೂಜಾರಿ, ಬಿ.ಜಿ ಸುವರ್ಣ, ಚಂದನ್ ದಾಸ್ ಪಾಲ್ಗೊಂಡಿದ್ದರು.

ಡಿಜೆಗೆ ಅವಕಾಶವಿಲ್ಲ; ಸಂತೆ ಮುಕ್ತ

ಕುದ್ರೋಳಿ ಕ್ಷೇತ್ರದ ದಸರೆಯಲ್ಲಿ ಡಿಜೆ ಮತ್ತು ಅಬ್ಬರಕ್ಕೆ ಅವಕಾಶ ನೀಡುವುದೇ ಇಲ್ಲ. ಕಳೆದ ವರ್ಷ ಯಾರೋ ಕೆಲವರು ತಿಳಿಯದೇ ಡಿಜೆ ಹಾಕಿದ್ದಾರೆ. ಅದನ್ನು ಪೊಲೀಸರು ತಡೆದಿದ್ದಾರೆ. ಈ ವರ್ಷ ಡಿಜೆ ಕುರಿತು ಸರ್ಕಾರವೇ ಸ್ಪಷ್ಟ ನಿಲುವು ತಾಳಿದೆ. ಎಸ್‌ಒಪಿಯಲ್ಲಿ ನಿರ್ಬಂಧಗಳ ಮಾಹಿತಿಯನ್ನು ನೀಡಲಾಗಿದೆ ಹೀಗಾಗಿ ಕುದ್ರೋಳಿ ದಸರೆಯಲ್ಲಿ ಡಿಜೆಗೆ ಅವಕಾಶ ಇಲ್ಲ ಎಂದು ಪದ್ಮರಾಜ್ ತಿಳಿಸಿದರು. ಸಂತೆ ಇಡುವ ಜಾಗಕ್ಕೆ ಸಂಬಂಧಿಸಿ ಸ್ಪಷ್ಟವಾದ ಮಾಹಿತಿ ನೀಡಲಾಗುವುದು. ಇಲ್ಲಿ ಎಲ್ಲ ಧರ್ಮೀಯರಿಗೂ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಎಲ್ಲರನ್ನೂ ಸಮಾನವಾಗಿ ಕಂಡ ನಾರಾಯಣ ಗುರುಗಳು ಸ್ಥಾಪಿಸಿದ ದೇವಾಲಯವಿದು. ಆದ್ದರಿಂದ ಜಾತಿ ಧರ್ಮದ ಆಧಾರದಲ್ಲಿ ಬೇಧಕ್ಕೆ ಅವಕಾಶವಿಲ್ಲ. ಇಲ್ಲಿಗೆ ಬರುವವರೆಲ್ಲರನ್ನೂ ದೇವರ ಮಕ್ಕಳೆಂದೇ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.