ADVERTISEMENT

ಕುಕ್ಕೆ: ಚಂಪಾಷಷ್ಠಿ ಮಹಾರಥೋತ್ಸವ

ಲೋಕೇಶ್ ಸುಬ್ರಹ್ಮಣ್ಯ
Published 7 ಡಿಸೆಂಬರ್ 2024, 5:10 IST
Last Updated 7 ಡಿಸೆಂಬರ್ 2024, 5:10 IST
ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ      
ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ         

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಶನಿವಾರ ಬೆಳಿಗ್ಗೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನಡೆಯಲಿದೆ. ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ.

ನಂತರ ಸುವರ್ಣ ವೃಷ್ಟಿ, ಚಿಕ್ಕ ರಥೋತ್ಸವ, ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಲಿದೆ. ನಂತರ ಪ್ರಧಾನ ಅರ್ಚಕರು ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದ ವಿತರಿಸಲಿದ್ದಾರೆ. ಬಳಿಕ ಮಹಾರಥೋತ್ಸವ ಸೇವೆ ನೆರವೇರಿಸಿದ ಭಕ್ತರಿಗೆ ಮಹಾಪ್ರಸಾದ ನೀಡಲಿದ್ದಾರೆ. ಬ್ರಹ್ಮರಥ ಎಳೆಯಲು ನೂಕು ನುಗ್ಗಲು ಉಂಟಾಗುವುದನ್ನು ತಪ್ಪಿಸಲು ಆಡಳಿತ ಮಂಡಳಿ ರಥ ಎಳೆಯಲು ಪಾಸ್‌ ವ್ಯವಸ್ಥೆ ಮಾಡಿದೆ. ಕಬ್ಬಿಣದ ಗೇಟ್ ಅನ್ನೂ ಅಳವಡಿಸಲಾಗಿದೆ.

ಈ ಹಿಂದೆ ಬೆತ್ತವನ್ನು ಭಕ್ತರು ಪೈಪೋಟಿಯೊಂದಿಗೆ ತುಂಡು ಮಾಡಿ ಮನೆಗೆ ಕೊಂಡೊಯ್ಯುತ್ತಿದ್ದರು. ಇದೀಗ ಬ್ರಹ್ಮ ರಥ ಎಳೆಯಲು ಉಪಯೋಗಿಸಿದ ಎಲ್ಲ ಬೆತ್ತವನ್ನೂ ದೇವಳವೇ ಉಪಯೋಗಿಸಲಿದೆ. ಬ್ರಹ್ಮರಥ ಎಳೆದ ಬೆತ್ತವು ಅಪೂರ್ವವಾದ ಸ್ಥಾನ ಪಡೆದಿದೆ. ದೇವಳದಲ್ಲಿ ನಡೆಯುವ ಸೇವೆಗಳಿಗೆ ಕೊಡುವ ಮಹಾಪ್ರಸಾದದಲ್ಲಿ ಬೆತ್ತದ ತುಂಡು ನೀಡಲಾಗುತ್ತಿದೆ. ಇದೀಗ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವುದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ರಥ ಎಳೆದ ಎಲ್ಲ ಬೆತ್ತವನ್ನು ದೇವಳವೇ ಉಪಯೋಗಿಸಲಿದೆ.

ADVERTISEMENT

ಕುಕ್ಕೆ ಕ್ಷೇತ್ರಕ್ಕೆ ಸ್ಕಂದ ಪಂಚಮಿಯ ದಿನವಾದ ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಹಾಗೂ ಬಿಳಿನೆಲೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಧರ್ಮ ಜಾಗೃತಿಗಾಗಿ ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯ ನಡೆಗೆ ಘೋಷ ವಾಕ್ಯದೊಂದಿಗೆ ಆರನೇ ವರ್ಷದ ಪಾದಯಾತ್ರೆ ಹಾಗೂ ಹೊರೆಕಾಣಿಕೆ ಸಮರ್ಪಣೆ ಶುಕ್ರವಾರ ಜರುಗಿತು.‌

ಕಡಬ ದುರ್ಗಾಂಬಿಕಾ ಅಮ್ಮನವರ ವಠಾರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ರಥಬೀದಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದಲ್ಲಿ ಆರಂಭಿಸಿರುವ ಮಾಧ್ಯಮ ಕೇಂದ್ರವನ್ನು ಜುಬಿನ್ ಮೊಹಪಾತ್ರ ಉದ್ಘಾಟಿಸಿದರು.

ಜಾತ್ರೆಯ ವೈಭವ ಹೆಚ್ಚಿಸಿದ ದೀಪಾಲಂಕಾರ

ಸುಬ್ರಹ್ಮಣ್ಯ: ಜಾತ್ರೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಅಳವಡಿಸಿರುವ ವಿಶೇಷ ವಿದ್ಯುದ್ದೀಪಾಲಂಕಾರದಿಂದ ಜಾತ್ರೆಯ ವೈಭವ ಹೆಚ್ಚಾಗಿದೆ. ವಿದ್ಯುತ್ ಪರಿಕರಗಳಿಂದ ರಚಿಸಿರುವ ದೀಪಾಲಂಕೃತ ದ್ವಾರವು ಭಕ್ತರನ್ನು ಸ್ವಾಗತಿಸುತ್ತಿದೆ.

ಕಾಶಿಕಟ್ಟೆಯ ಸುತ್ತ ಅಳವಡಿಸಿದ ವಿದ್ಯುತ್ ವ್ಯವಸ್ಥೆ, ಸವಾರಿ ಮಂಟಪದ ಬಳಿಯ ವೃತ್ತದ ಸುತ್ತ ಅಳವಡಿಸಿ ಆಕರ್ಷಕ ಪ್ರಭಾವಳಿ ಮತ್ತು ಆವರಣಕ್ಕೆ ಪೋಣಿಸಿದ ವಿದ್ಯುತ್ ಬಲ್ಬ್‌ಗಳು ಆಕರ್ಷಣೆ ಹೆಚ್ಚಿಸಿವೆ. ದೇವಳದ ಗೋಪುರ, ಕುಮಾರಧಾರ ದ್ವಾರ, ಬಿಲದ್ವಾರ, ದೇವಳದ ಪರಿಸರ, ಆದಿಸುಬ್ರಹ್ಮಣ್ಯ, ದೇವಳದ ವಸತಿಗೃಹಗಳು, ಆಡಳಿ ಕಚೇರಿಯನ್ನೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಈ ಬಾರಿ ವಿಶೇಷವಾಗಿ ರಥಬೀದಿಯ ಇಕ್ಕೆಲದಲ್ಲಿ ವಿದ್ಯುತ್ ದೀಪಾಲಂಕೃತ ಕೊಡೆಗಳನ್ನು ಅಳವಡಿಸಲಾಗಿದೆ. ಗೋಪುರದ ಬಳಿಯಿಂದ ಆದಿಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಇಕ್ಕೆಲದಲ್ಲಿ ವೃಕ್ಷದ ಕೊಂಬೆ ಮಾದರಿಯ ದೀಪ ರಚನೆ ಅಳವಡಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.