ADVERTISEMENT

ಬಗ್ಗಂಡಿ ಕೆರೆಯ ವ್ಯಥೆ; ಹೋರಾಟಗಳ ಕಥೆ

ಕೈಗಾರಿಕೆಗಳ ನಡುವೆಯೇ ನಡೆದಿದೆ ಅಭಿವೃದ್ಧಿಯ ನಾಗಾಲೋಟ; ಕರ್ತವ್ಯನಿರತರಾಗಿರುವ ಯುವಕೂಟ

ವಿಕ್ರಂ ಕಾಂತಿಕೆರೆ
Published 27 ಜೂನ್ 2025, 5:44 IST
Last Updated 27 ಜೂನ್ 2025, 5:44 IST
ಕಳೆ ಮತ್ತು ಕಸ ತುಂಬಿ ಕೊಳಚೆಯಾಗಿ ದುರ್ನಾತ ಬೀರುತ್ತಿರುವ ಬಗ್ಗಂಡಿ ಕೆರೆ
ಕಳೆ ಮತ್ತು ಕಸ ತುಂಬಿ ಕೊಳಚೆಯಾಗಿ ದುರ್ನಾತ ಬೀರುತ್ತಿರುವ ಬಗ್ಗಂಡಿ ಕೆರೆ   

ಮಂಗಳೂರು: ಕೈಗೆಟಕುವ ದೂರದಲ್ಲಿ ಕೈಗಾರಿಕೆಗಳು. ಮತ್ತೊಂದೆಡೆ ಅಭಿವೃದ್ಧಿಯ ನಾಗಾಲೋಟದ ಕುರುಗಳು. ಸಂಸ್ಕೃತಿ ಪರಂಪರೆಯ ನಡೆಯನ್ನು ಮರೆಯದೆ ವೈವಿಧ್ಯಮಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವ ಸಮುದಾಯ, ಅನ್ಯಾಯವಾದಾಗ ನ್ಯಾಯಾಲಯದ ವರೆಗೂ ಹೋರಾಟದ ಕಹಳೆ ಮೊಳಗಿಸಿದ ಪ್ರಗತಿಪರರು. 

ಇಂಥ ವೈವಿಧ್ಯತೆಯನ್ನು ಒಡಲಲ್ಲಿ ಹುದುಗಿಸಿಕೊಟ್ಟುಕೊಂಡಿರುವ ವಾರ್ಡ್‌ ಕುಳಾಯಿ. ಪನ್ವೇಲ್–ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಮೈಚಾಚಿಕೊಂಡಿರುವ ಈ ವಾರ್ಡ್‌ನಲ್ಲಿರುವ ಬಗ್ಗಂಡಿ ಕೆರೆ ಮೀನು ಹಿಡಿಯುವ ಉತ್ಸವಕ್ಕೆ ಹೆಸರುವಾಸಿ. ಆದರೆ ಈಗ ಅದು ಕೈಗಾರಿಕೆಗಳಿಂದ ಬರುವ ಕೊಳೆ ಮತ್ತು ಜನರು ಎಸೆಯುವ ಕಸದಿಂದಾಗಿ ಕೊಳೆ ತುಂಬಿ ಹಾಳಾಗಿದೆ. ಆದ್ದರಿಂದ ಮೀನುಗಳು ಬದುಕದಂತಾಗಿದೆ. ದುರ್ವಾಸನೆ ಸೂಸುವುದರಿಂದ ಸಮೀಪವಾಸಿಗಳ ಬದುಕು ದುಸ್ತರವಾಗಿದೆ.  

ಕುಳಾಯಿ ವಾರ್ಡ್‌ನ ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಾಗಿದೆ. ಮತ್ತೊಂದು ಭಾಗ ಹಳ್ಳಿಯ ವಾತಾವರಣ ಹೊಂದಿದೆ. ಇಂಥ ಪ್ರದೇಶದಲ್ಲಿ ಬಗ್ಗಂಡಿ ಕೆರೆ ಇದೆ. ಅದರಲ್ಲಿ ಈಗ ಕಳೆಯೇ ತುಂಬಿಕೊಂಡಿದೆ. ಆದ್ದರಿಂದ ಕೆರೆಗೆ ಇಳಿಯಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಮೀನು ಹಿಡಿಯುವ ಉತ್ಸವಕ್ಕೆ ಧಕ್ಕೆಯಾಗಿದೆ ಎನ್ನುತ್ತಾರೆ ಸ್ಥಳೀಯರು. 

ADVERTISEMENT

ದೇವಸ್ಥಾನಗಳು, ಸಮುದಾಯ ಭವನಗಳನ್ನು ಒಳಗೊಂಡಿರುವ, ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಚಾಚಿಕೊಂಡಿರುವ ಬಡಾವಣೆಯ ಒಳಗೆ ಹಳ್ಳಿಯ ವಾತಾವರಣವಿದೆ. ಬೃಹತ್ ಉದ್ದಿಮೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ನಡುವೆಯೇ ಹಸಿರು ಹೊದ್ದುಕೊಂಡಿರುವ ಬಡಾವಣೆಯ ಒಳಗೆ ತಂಪು ವಾತಾವರಣದಲ್ಲಿ ಮನೆಗಳು ಇವೆ. ಗ್ರಂಥಾಲಯಗಳು ಜ್ಞಾನದ ದಾಹವನ್ನು ತಣಿಸಿದರೆ, ಯುವಕ ಸಂಘಗಳು ಸಾಮಾಜಿಕ ಕಾರ್ಯಗಳಿಗೆ ಸದಾ ಸನ್ನದ್ಧರಾಗಿದ್ದಾರೆ. ಕುಳಾಯಿ ಜಂಕ್ಷನ್‌ನಿಂದ ಭಜನಾ ಮಂದಿರದ ಕಡೆಗೆ ಹೋಗುವ ರಸ್ತೆಗೆ ಅನುಮೋದನೆ ಲಭಿಸಿ 15 ವರ್ಷ ಕಳೆದರೂ ಕಾಮಗಾರಿ ಆರಂಭವಾಗಲಿಲ್ಲ ಎಂಬ ಕೊರಗು ಅನೇಕರು ವ್ಯಕ್ತಪಡಿಸಿದರು.

ವಿಶ್ವನಾಥ ಬಳಗದ ಹೋರಾಟದ ಕಥೆ 

ವಾರ್ಡ್ ವ್ಯಾಪ್ತಿಯ ಹೊನ್ನಕಟ್ಟೆಯಲ್ಲಿರುವ 38 ಸೆಂಟ್ ಜಾಗದ ಪೈಕಿ 13 ಸೆಂಟ್‌ಗೆ ಸಂಬಂಧಿಸಿ ಸುದೀರ್ಘ ಹೋರಾಟ ನಡೆದಿರುವ ಕಥೆಯನ್ನು ಬಿಚ್ಚಿಡುತ್ತಾರೆ ಅಲ್ಲಿನ ನಿವಾಸಿ ವಿಶ್ವನಾಥ ಜೆ. ಕಾನ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಜಾಗದ ರಸ್ತೆಯ ಭಾಗವನ್ನು ಕೆಲವು ಹಿತಾಸಕ್ತಿಗಳು ಕಬಳಿಸಿದ್ದಾರೆ ಎಂದು ದೂರುವ ಅವರು ದಾರಿ ಮತ್ತು ಚರಂಡಿ ವ್ಯವಸ್ಥೆ ಮಾಡದಂತೆ ತಡೆಯಲಾಗಿದ್ದು ನ್ಯಾಯಾಲಯ ಅಲ್ಲಿನ ನಿವಾಸಿಗಳ ಪರವಾಗಿ ಆದೇಶ ನೀಡಿದ್ದರೂ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸೌಲಭ್ಯಗಳನ್ನು ನೀಡದಂತೆ ಮಾಡಲಾಗಿದೆ ಎಂದು ಆರೋಪಿಸಿದರು.   

‘ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ಆರು ತಿಂಗಳು ಕಳೆದಿದ್ದರೂ ಯಾರದೋ ಮಾತು ಕೇಳಿ ಅಧಿಕಾರಿಗಳು ಮೀನ–ಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ’ ಎಂದು ಅವರು ತಿಳಿಸಿದರು.

‘ಇಲ್ಲಿ ರಾಜಕೀಯ ಮೇಲಾಟದ್ದೇ ಕಾಟ. ಅಭಿವೃದ್ಧಿ ಕೆಲಸಗಳಲ್ಲೂ ಸೌಲಭ್ಯಗಳನ್ನು ಒದಗಿಸುವುದರಲ್ಲೂ ಪೂರ್ವಾಗ್ರಹ ತುಂಬಿದೆ. ಎಲ್ಲ ಪಕ್ಷದವರೂ ತಮಗೆ ಬೇಕಾದಂತೆ ವರ್ತಿಸುತ್ತಿವೆ. ಜನರ ಸಂಕಷ್ಟಗಳಿಗೆ ಪರಿಹಾರ ಕಾಣಲು ಯಾರೂ ಮುಂದಾಗುತ್ತಿಲ್ಲ. ಹೋರಾಟಕ್ಕೂ ಬೆಲೆ ಇಲ್ಲ’ ಎಂದು ಅವರು ದೂರಿದರು.

ಕಳೆ ಮತ್ತು ಕಸ ತುಂಬಿ ಕೊಳಚೆಯಾಗಿ ದುರ್ನಾತ ಬೀರುತ್ತಿರುವ ಬಗ್ಗಂಡಿ ಕೆರೆ

ವಾರ್ಡ್ ವಿಶೇಷ: ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಚಾಚಿಕೊಂಡಿರುವ ಕುಳಾಯಿ ವಾರ್ಡ್‌ನ ಒಳಗೆ ಓಡಾಡಿದರೆ ಬಡಾವಣೆಗಳಲ್ಲಿ ಹಳ್ಳಿಯ ವಾತಾವರಣ ಕಾಣಸಿಗುತ್ತದೆ. ಒಂದು‌ಕಡೆ ಬೃಹತ್ ಉದ್ಯಮಗಳಿದ್ದರೆ ಮತ್ತೊಂದೆಡೆ ಹಸಿರ ಹೊದಿಕೆ ನಡುವೆ ತಂಪಾಗಿರುವ‌ ಮನೆಗಳು. ಗ್ರಂಥಾಲಯ ಯುವಕ ಸಂಘಗಳು ದೇವಸ್ಥಾನ ದೈವಸ್ಥಾನ ಸಮುದಾಯ ಭವನಗಳು ಇರುವ ಈ ವಾರ್ಡ್ ಕ್ರಿಯಾಶೀಲತೆಗೆ ಕನ್ನಡಿಯಂತೆ ನಿಲ್ಲುತ್ತದೆ.

ಪ್ರಮುಖ ಬೇಡಿಕೆಗಳು

* ಎಂಆರ್‌ಪಿಎಲ್‌–ಕಾನ ರಸ್ತೆ ನಿರ್ಮಾಣ ಆಗಿ ವರ್ಷಗಳೇ ಕಳೆದರೂ ಚರಂಡಿ ವ್ಯವಸ್ಥೆ ಆಗಲಿಲ್ಲ. ಅದನ್ನು ಆದಷ್ಟು ಶೀಘ್ರ ಮಾಡಬೇಕು.

* ಹೊನ್ನಕಟ್ಟೆ ಗ್ರಾಮ ಸಂಘದ ಬಳಿ ಇರುವ 60 ಮನೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲ. ಅದನ್ನು ಆದಷ್ಟು ಶೀಘ್ರ ಮಾಡಿಕೊಡಬೇಕು. 

* ಕೆಲವು ಪ್ರದೇಶಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಈ ತೊಂದರೆಯನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.