
ಮಂಗಳೂರು: ಬಜಾಲ್ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರವು ನೀಡುವ 2025-26ನೇ ಸಾಲಿನ ಬಾಬು ಕುಡ್ತಡ್ಕ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಕುಮಾರಗೌಡ ಅವರು ಆಯ್ಕೆಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಕಲಾಕೇಂದ್ರದ ಸಂಚಾಲಕ ಕೆ.ಸಿ.ಹರೀಶ್ಚಂದ್ರ ರಾವ್, ‘ಶೇಣಿ, ಸಾಮಗ ಕಾಲಘಟ್ಟದ ಕಲಾವಿದರಾದ ಕುಮಾರಗೌಡರು ಮೇಳಗಳಲ್ಲಿ 53 ವರ್ಷ ತಿರುಗಾಟ ನಡೆಸಿದ್ದಾರೆ. ಉತ್ತಮ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆಗೆ ಹೆಸರಾಗಿದ್ದ ಅವರು ದೇವೇಂದ್ರ, ಅರ್ಜುನ, ಸುಗ್ರೀವ, ಭೀಮ, ಶ್ರೀರಾಮ, ಧರ್ಮರಾಯ ಮುಂತಾದ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಉತ್ತಮ ಕೃಷಿಕನಾಗಿ, ಕುಡುಬಿ ಜನಾಂಗದ 'ನಾಯಕ'ರಾಗಿಯೂ ಪ್ರಸಿದ್ಧರಾಗಿದಾರೆ’ ಎಂದು ತಿಳಿಸಿದರು.
ಇದೇ 7ರಂದು ಸಂಜೆ 4ರಿಂದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ₹10 ಸಾವಿರ ನಗದು ಪುರಸ್ಕಾರವನ್ನು ಒಳಗೊಂಡ ಪ್ರಶಸ್ತಿಯನ್ನು ಕುಮಾರ ಗೌಡರಿಗೆ ಪ್ರದಾನ ಮಾಡಲಾಗುತ್ತದೆ. ಅಂದು ಶಾಂಭವಿ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಶುಂಭನಾಗಿ ಜಬ್ಬಾರ್ ಸಮೋ, ರಕ್ತಬೀಜನಾಗಿ ಸರ್ಪಂಗಳ, ದೇವಿಯಾಗಿ ಪ್ರಶಾಂತ್ ಹೊಳ್ಳ ಅರ್ಥ ಹೇಳಲಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾಕೇಂದ್ರದ ಗೌರವಾಧ್ಯಕ್ಷ ಬಿ.ಪ್ರಕಾಶ್ ಪೈ, ಅಧ್ಯಕ್ಷೆ ಲಲಿತಾ ಗೌಡ, ಕಾರ್ಯದರ್ಶಿ ಆನಂದರಾವ್, ಖಜಾಂಚಿ ಅಶೋಕ ಜಾಧವ್, ಸೇವಾ ಕಾರ್ಯದರ್ಶಿ ಸುಮಲತಾ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ ಹಾಗೂ ಮನೋಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.