ADVERTISEMENT

ಮಂಗಳೂರು: ಕುಂರ್ದೋಡಿ ಕೆರೆಗೆ ಬೇಕಿದೆ ಕಾಯಕಲ್ಪ

ಪಿ.ವಿ.ಪ್ರವೀಣ್‌ ಕುಮಾರ್‌
Published 19 ಮಾರ್ಚ್ 2025, 5:34 IST
Last Updated 19 ಮಾರ್ಚ್ 2025, 5:34 IST
ಮಂಗಳೂರಿನ ಫೈಸಲ್‌ನಗರ ವಾರ್ಡ್‌ನ ಕುಂರ್ದೋಡಿ ಕೆರೆ
ಮಂಗಳೂರಿನ ಫೈಸಲ್‌ನಗರ ವಾರ್ಡ್‌ನ ಕುಂರ್ದೋಡಿ ಕೆರೆ   

ಮಂಗಳೂರು: ಫೈಸಲ್ ನಗರ ವಾರ್ಡಿನಲ್ಲಿ ಬಜಾಲ್‌ ಜಲ್ಲಿಗುಡ್ಡೆ ಬಳಿ ಇರುವ ಕುಂರ್ದೋಡಿ ಕೆರೆ ಒಂದು ಕಾಲದಲ್ಲಿ ಈ ಪ್ರದೇಶದ ಕೃಷಿ ಭೂಮಿಗಳಿಗೆ ನೀರುಣಿಸುತ್ತಿದ್ದ ಜಲಮೂಲ. ಈಗಲೂ ಈ ಕೆರೆಯ ನೀರು ಕಲುಷಿತವಾಗದೇ ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿದೆ. ಆದರೆ ಕೆರೆಯ ಮೂಲಸೌಕರ್ಯದ ಕೊರೆತೆ ಇದೆ. ನಿರ್ವಹಣೆ ಇಲ್ಲದೇ ಈ ಕೆರೆ ಸೊರಗಿದೆ. 

ಈ ಕೆರೆಯನ್ನು ಐದು ವರ್ಷಗಳ ಹಿಂದೆ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಸುತ್ತಲೂ ನಿರ್ಮಿಸಿರುವ ಬೇಲಿಗೆ ಬಳ್ಳಿಗಳು ಸುತ್ತಿಕೊಂಡಿವೆ. ಕೆರೆ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಕೆರೆ ಇರುವ ಜಾಗವನ್ನು ತಲುಪುವುದಕ್ಕೂ ಹರಸಾಹಸ ಪಡಬೇಕಾದ ಸ್ಥಿತಿ ಇದೆ. 

‘ಹೂಳೆತ್ತಿ, ಕೆರೆಯ ಸುತ್ತಲೂ ಬೇಲಿ ನಿರ್ಮಿಸಲಾಗಿದೆ. ಈ ಕೆರೆಗೆ ಮಳೆ ನೀರು ಮಾತ್ರ ಸೇರುವಂತೆ ಹಾಗೂ ಯಾವುದೇ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಈ ವಾರ್ಡ್‌ನ ನಿಕಟಪೂರ್ವ ಪಾಲಿಕೆ ಸದಸ್ಯ ಅಶ್ರಫ್‌. 

ADVERTISEMENT

ಸ್ಥಳೀಯರು ಹೇಳುವ ಪ್ರಕಾರ, 33 ಸೆಂಟ್ಸ್‌ ಜಾಗದಲ್ಲಿ ಹರಡಿರುವ ಈ ಪುಟ್ಟ ಕೆರೆಯಲ್ಲಿ ಈಗಲೂ 10 ಅಡಿಗೂ ಹೆಚ್ಚು ನೀರಿದೆ. ನೀರೂ ಸ್ವಚ್ಛವಾಗಿದೆ. ಈ ಕೆರೆ ಭರ್ತಿಯಾಗಿ ನೀರು ಹೊರ ಹರಿಯುವುದಕ್ಕೆ ಪುಟ್ಟ ನಾಲೆಯೂ ಇದೆ. ಅದರ ಮೇಲೆಯೇ ರಸ್ತೆ ನಿರ್ಮಿಸಲಾಗಿದೆ. ಆದರೆ, ನೀರು ಹರಿಯುವ ನಾಲೆಯನ್ನು ಉಳಿಸಿಕೊಳ್ಳಲಾಗಿದೆ. ಈ ಕೆರೆಯ ಹೂಳೆತ್ತಿ ಇದರಲ್ಲಿ ಹೆಚ್ಚು ನೀರು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ  ಬೇಸಿಗೆಯಲ್ಲೂ ಈ ಕೆರೆಯ ನೀರು ಬತ್ತುವುದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದರು. 

ಕೆರೆಯನ್ನು ಅಭಿವೃದ್ಧಿಪಡಿಸಿದರೂ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಇಲ್ಲಿಗೆ ಇನ್ನಷ್ಟು ಸೌಕರ್ಯ ಕಲ್ಪಿಸಿ ಇದನ್ನೊಂದು ಜನಾಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

‘ಈ ಕೆರೆಯ ಸುತ್ತ ಸುತ್ತ ವಿಹಾರಪಥವನ್ನು ನಿರ್ಮಿಸಿ, ಆಸನಗಳನ್ನು ಅಳವಡಿಸಬೇಕು. ಸಂಜೆ ಹಾಗೂ ಮುಂಜಾನೆ ಜನ ಇಲ್ಲಿಗೆ ಜನ ಭೇಟಿ ನೀಡಿ ಹೊತ್ತು ಕಳೆಯುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಆಗ ಕೆರೆಯು ಚೆನ್ನಾಗಿರುತ್ತದೆ. ಊರಿನವರಿಗೆ ವಾಯು ವಿಹಾರಕ್ಕೂ ವ್ಯವಸ್ಥೆಯಾಗುತ್ತದೆ’ ಎಂದು ಬಜಾಲ್‌ ಬೀಡು ಹೊಸಮನೆಯ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.  

ಕೆರೆಯ ಜಾಗವನ್ನು ತಲುಪಲು, ಅದರ ಉತ್ತರ ದಿಕ್ಕಿನಲ್ಲಿ ಮಣ್ಣಿನ ರಸ್ತೆಯನ್ನು ಸ್ಥಳೀಯರೇ ಸೇರಿ ನಿರ್ಮಿಸಿದ್ದಾರೆ. ಅಲ್ಲಿಗೂ ಪಕ್ಕಾ ರಸ್ತೆ ನಿರ್ಮಾಣವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಈ ಕೆರೆಯನ್ನು ಚೆನ್ನಾಗಿ ಅಭಿವೃದ್ಧಿಮಾಡಿದರೆ ಇದರಲ್ಲಿ ಮೀನು ಸಾಕಣೆಗೂ ಅವಕಾಶ ಇದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

ಈ ಕೆರೆಯ ಹೂಳೆತ್ತಿ ಬೇಲಿ ನಿರ್ಮಿಸಿದ್ದು ಒಳ್ಳೆಯದೇ. ಜನ ಇದರತ್ತ ಸುಳಿಯುವಂತೆ ಮಾಡಬೇಕಾದರೆ ಇದಕ್ಕೆ ಇನ್ನಷ್ಟು ಮೂಲಸೌಕರ್ಯ ಕಲ್ಪಿಸಬೇಕು
ಜಯರಾಮ ಶೆಟ್ಟಿ ಬಜಾಲ್‌ ಬೀಡು ಹೊಸಮನೆ
ಲಭ್ಯ ಅನುದಾನವನ್ನು ಬಳಸಿ ಕೆರೆಯ ಹೂಳೆತ್ತಿ ಸುತ್ತಲೂ ಕಲ್ಲುಗಳನ್ನು ಕಟ್ಟಿ ಕೆರೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಕಲುಷಿತ ನೀರು ಸೇರದಂತೆ ತಡೆದಿದ್ದೇವೆ
ಅಶ್ರಫ್‌ ಮಾಜಿ ಕಾರ್ಪೊರೇಟರ್‌ ಫೈಜಲ್‌ನಗರ ವಾರ್ಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.