ADVERTISEMENT

‘ಯಾನ’ದ ಯುವತಿಯರ ಸಾಹಸ ಗಾಥೆ

ಶಿಖರದಿಂದ ಸಾಗರದವರೆಗೆ 75 ದಿನಗಳ ಪಯಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 14:51 IST
Last Updated 1 ನವೆಂಬರ್ 2021, 14:51 IST
ಸಾಹಸ ಯಾನ ಪೂರ್ಣಗೊಳಿಸಿದ ಯುವತಿಯರನ್ನು ಉಳ್ಳಾಲದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಸಾಹಸ ಯಾನ ಪೂರ್ಣಗೊಳಿಸಿದ ಯುವತಿಯರನ್ನು ಉಳ್ಳಾಲದಲ್ಲಿ ಸೋಮವಾರ ಸನ್ಮಾನಿಸಲಾಯಿತು.   

ಉಳ್ಳಾಲ: ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವತಿಯರು ಕಾಶ್ಮೀರದಿಂದ ಪರ್ವತಾರೋಹಣ, ಸೈಕ್ಲಿಂಗ್ ಹಾಗೂ ಸಮುದ್ರಯಾನವನ್ನು 75 ದಿನಗಳ ಕಾಲ ಕೈಗೊಂಡು ಯಶಸ್ವಿಯಾಗಿರುವುದು ರಾಜ್ಯ ಸರ್ಕಾರ ಹಾಗೂ ಸಮಾಜಕ್ಕೆ ಹೆಮ್ಮೆಯ ವಿಚಾರ. ಅವರನ್ನು ವಿಧಾನಸೌಧಕ್ಕೆ ಕರೆಸಿ, ಮುಖ್ಯಮಂತ್ರಿ ಸಮ್ಮುಖದಲ್ಲಿ ಗೌರವಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಂಡಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ಅದ್ಧೂರಿ ಸ್ವಾಗತ ಕೋರಿ ಅವರು ಮಾತನಾಡಿದರು.

ಶಾಸಕ ಯು.ಟಿ ಖಾದರ್ ಮಾತನಾಡಿ, ‘ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸವಾಗಿದೆ. ಜಿಲ್ಲೆಯಲ್ಲಿ ಕೂಡ ಜನರಲ್ ಕರಿಯಪ್ಪ ಅಕಾಡೆಮಿ ಆಫ್ ಅಡ್ವೆಂಚರ್ಸ್ ಟ್ರೇನಿಂಗ್ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಚಿಂತನೆ ನಡೆಸಲಾಗಿದೆ. ಈ ಮೂಲಕ ಜಿಲ್ಲೆಯ ಯುವಜನರು ತರಬೇತಿ ಪಡೆಯುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

ಶಿಖರದಿಂದ ಸಮುದ್ರದವರೆಗೆ: ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ (5425 ಮೀ) ಶಿಖರವನ್ನು ಏರಿ ನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್‌ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ, ಕಯಾಕಿಂಗ್ ಯಾನ ಮಾಡಿ ಮಂಗಳೂರಿನ ಉಳ್ಳಾಲದ ಕಡಲ ತೀರವನ್ನು ತಲುಪಿದರು.

ಈ ಯಾತ್ರೆಗೆ ಕಳೆದ ಆಗಸ್ಟ್ 16ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಇದು ಸುಮಾರು 70 ದಿನಗಳ ಸಾಹಸ ಯಾತ್ರೆಯಾಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ಸಮಾನತೆ, ಸ್ತ್ರೀ ಸಬಲೀಕರಣವನ್ನು ನಿರೂಪಿಸಿದೆ. ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ನಡೆಸಲಾಗಿತ್ತು.

ಕಾರವಾರದಿಂದ ಕಯಾಕ್ ಮೂಲಕ ಹೊರಟ ಶಿವಮೊಗ್ಗದ ಐಶ್ವರ್ಯಾ ವಿ, ಬೆಂಗಳೂರಿನ ಧನಲಕ್ಷ್ಮಿ ಮತ್ತು ಆಶಾ, ಮೈಸೂರಿನ ಬಿಂದು, ಕೊಡಗಿನ ಪುಷ್ಪಾ ಅವರನ್ನು ಒಳಗೊಂಡ ಯುವತಿಯರ ತಂಡವು ಸೋಮವಾರ ಉಳ್ಳಾಳ ಕಡಲ ತೀರಕ್ಕೆ ಬಂದು ಈ ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಿತು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಯಾಸ್, ಉಳ್ಳಾಲ ನಗರಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಉಳ್ಳಾಲ್, ಸದಸ್ಯರಾದ ಭಾರತಿ, ಸುರೇಶ್ ಭಟ್ ನಗರ, ನಗರಸಭೆ ಪೌರಾಯುಕ್ತ ರಾಯಪ್ಪ ಇದ್ದರು.

‌‘ಇದೇ ಮೊದಲ ಬಾರಿ’

‘ಯುವತಿಯರು ಇಂತಹ ಯಾನವನ್ನು ಕೈಗೊಂಡಿರುವುದು ಇದೇ ಮೊದಲ ಬಾರಿ. ಭಾರತೀಯ ಸೇನೆಯಲ್ಲಿಯೂ ಆಗಿಲ್ಲ. ಇಂಡಿಯನ್ ಮೌಂಟೇನ್ ಫೌಂಡೇಷನ್‌ನಲ್ಲಿ ಈವರೆಗೂ ಯುವತಿಯರ ಬಹುದೊಡ್ಡ ಯಾನ ದಾಖಲಾಗಿರಲಿಲ್ಲ’ ಎಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರ ಕೀರ್ತಿ ಪಾಯಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.