ADVERTISEMENT

ಬೆಳ್ತಂಗಡಿ: 4 ವರ್ಷದಲ್ಲಿ 274 ಕೆರೆಗೆ ಮರುಜೀವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕೆರೆ ಸಂಜೀವಿನಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 14:53 IST
Last Updated 29 ಜುಲೈ 2020, 14:53 IST
ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನಗೊಳಿಸಿದ ಶಿವಮೊಗ್ಗ ಜಿಲ್ಲೆಯ ಹಾರೋವನ ಕೆರೆ
ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನಗೊಳಿಸಿದ ಶಿವಮೊಗ್ಗ ಜಿಲ್ಲೆಯ ಹಾರೋವನ ಕೆರೆ   

ಬೆಳ್ತಂಗಡಿ: ಅಂತರ್ಜಲ ಮಟ್ಟ ಕುಸಿತದ ಸಮಸ್ಯೆಯನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ 2016 ರಲ್ಲಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ಪ್ರಾರಂಭಿಸಿದ್ದು, ಈ ತನಕ ಒಟ್ಟು 274 ಕೆರೆಗಳ ಪುನಃಶ್ಚೇತನ ಕಾಮಗಾರಿ ನಡೆದಿದೆ. ಈ ಮಳೆಗಾಲದಲ್ಲಿ ಎಲ್ಲ ಕೆರೆಗಳಲ್ಲಿ ನೀರು ತುಂಬಿದೆ.

ರಾಜ್ಯದಲ್ಲಿ ಸರ್ಕಾರದ ಅಂಕಿ–ಅಂಶ ಪ್ರಕಾರ 36 ಸಾವಿರ ಕೆರೆಗಳಿವೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಧಾರವಾಡ, ಕೊಪ್ಪಳ, ಕಲ್ಬುರ್ಗಿ, ಯಾದಗಿರಿ, ಬೀದರ್, ಬಳ್ಳಾರಿ, ಚಿತ್ರದುರ್ಗ, ಗದಗ, ರಾಯಚೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಾಮರಾಜನಗರ ಇತ್ಯಾದಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಯೂ ಅಧಿಕವಾಗಿದೆ.

ಕರ್ನಾಟಕ ಸರ್ಕಾರವು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ‘ಕೆರೆ ಸಂಜೀವಿನಿ ಯೋಜನೆ’ಯ ಆರ್ಥಿಕ ನೆರವು ಮೂಲಕ ರಾಜ್ಯದಾದ್ಯಂತ ಕೆರೆ ಪುನಃಶ್ಚೇತನ ಕಾರ್ಯಕ್ರಮ ನಡೆಸುತ್ತಿದೆ. ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಉಸ್ತುವಾರಿಯಲ್ಲಿ ಕೆರೆ ಪುನಃಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ.

ADVERTISEMENT

ಕೆರೆ ಪುನಶ್ಚೇತನದಿಂದ ಹಲವು ತಾಲೂಕಿನಲ್ಲಿ ಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಅಂತರ್ಜಲ ಮಟ್ಟ ಹೆಚ್ಚಿ ಬತ್ತಿ ಹೋದ ಅನೇಕ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿದೆ. ಆಸುಪಾಸಿನ ರೈತರು ಕೃಷಿ ಕಾರ್ಯಗಳನ್ನು ಪ್ರಾರಂಭಿಸಿದ್ದರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆ ನಿವಾರಿಸಿದಂತಾಗಿದೆ.

31 ಕೆರೆಗಳು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತೀಯ ಜೈನ್ ಸಂಘಟನೆ ಜೊತೆಗೂಡಿ ಕಳೆದ ವರ್ಷದಿಂದ ಯಾದಗಿರಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಕೆರೆಗಳನ್ನು ಪುನಃಶ್ಚೇತನಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಒಟ್ಟು 31 ಕೆರೆಗಳ ಹೂಳೆತ್ತಲಾಗಿದೆ. 8 ಕೆರೆಗೆ ನೀರು ಬರುವ ನಾಲೆಗಳ ಕಾಮಗಾರಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 30 ಕೆರೆಗಳ ಹೂಳೆತ್ತುವ ಗುರಿ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.