ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಾನೂನು ಮಹಾವಿದ್ಯಾಲಯವನ್ನು ಆರಂಭಿಸಿದ್ದು, ಇದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆಯನ್ನೂ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಉದ್ಯೋಗ ಸಾಧ್ಯತೆ ಇರುವ 5 ವರ್ಷದ ಬಿಕಾಂ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿಗಳ ಮಿತಿಯೊಂದಿಗೆ ಹಾಗೂ 3 ವರ್ಷದ ಎಲ್ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿಗಳ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸಲು ಅನುಮತಿ ದೊರೆತಿದೆ. ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು, ಗುಣಾತ್ಮಕವಾದ ಕಾನೂನು ಶಿಕ್ಷಣಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ ಎಂದರು.
ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದವರು 3 ವರ್ಷಗಳ ಎಲ್ಎಲ್‌ಬಿ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಅಥವಾ ವಿಜ್ಞಾನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬಿಕಾಂ ಎಲ್‌ಎಲ್‌ಬಿ ಪ್ರವೇಶಕ್ಕೆ ಅರ್ಹರು. ದೇಶದ ವಿವಿಧ ಕಾನೂನು ವಿವಿಗಳಿಗೆ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳಿಗಿರುವ ಅರ್ಹತಾ ಪರೀಕ್ಷೆ ‘ಸಿಎಲ್‌ಎಟಿ’ಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
2024-25 ಶೈಕ್ಷಣಿಕ ವರ್ಷದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಮಾಹಿತಿಗಾಗಿ ಮೊ: 9379525826, 8147760394 ಸಂಪರ್ಕಿಸಬಹುದು ಎಂದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಕುರಿಯನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.