ADVERTISEMENT

ಕಾನೂನು ಪಾಲನೆ ಪ್ರತಿಯೊಬ್ಬರ ಹೊಣೆ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ಪುತ್ತೂರಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 5:52 IST
Last Updated 6 ಜೂನ್ 2025, 5:52 IST
ಬಕ್ರೀದ್ ಅಂಗವಾಗಿ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮಾತನಾಡಿದರು. ಡಿವೈಎಸ್ಪಿ ಅರುಣ್ ನಾಗೇಗೌಡ ಪಾಲ್ಗೊಂಡಿದ್ದರು
ಬಕ್ರೀದ್ ಅಂಗವಾಗಿ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮಾತನಾಡಿದರು. ಡಿವೈಎಸ್ಪಿ ಅರುಣ್ ನಾಗೇಗೌಡ ಪಾಲ್ಗೊಂಡಿದ್ದರು   

ಪುತ್ತೂರು: ಕಾನೂನು ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬರ ಹೊಣೆ. ಸ್ವಾತಂತ್ರ್ಯದ ಪರಿಪಾಲನೆಯಾಗಬೇಕೇ ಹೊರತು ಅದನ್ನು ಮೀರಿದ ವರ್ತನೆ ಸರಿಯಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹೇಳಿದರು.

ಬಕ್ರೀದ್ ಹಬ್ಬದ ಅಂಗವಾಗಿ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಡ್ರಗ್ಸ್ ಸೇವನೆ ಮತ್ತು ಸಾಮಾಜಿಕ ಜಾಲತಾಣದ ಕಾರಣದಿಂದಾಗಿ ತೊಂದರೆಯಾಗುತ್ತಿದೆ. ಇದನ್ನು ತಡೆಯುವುದು ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಹೆತ್ತವರು ಮತ್ತು ಸಾರ್ವಜನಿಕರೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ ಮಾತನಾಡಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ವರ್ತಿಸಬೇಕು. ಅಹಿತಕರ ಘಟನೆ ನಡೆದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಹಿತಕರ ಘಟನೆ ಕಂಡರೆ ಅನೈತಿಕ ಪೊಲೀಸ್‌ಗಿರಿ ಮಾಡದೆ ಪೊಲೀಸರ ಗಮನಕ್ಕೆ ತರಬೇಕು ಎಂದರು.

ADVERTISEMENT

ರಾತ್ರಿ ವೇಳೆ ಮನೆಯಲ್ಲಿ ಪರಿಶೀಲನೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದಕ್ಕೆ ಬಣ್ಣ ಹಚ್ಚುವ ಕೆಲಸ ಮಾಡಬಾರದು. ಪೊಲೀಸರು ಸುಮ್ಮನೆ ಮನೆಗೆ ಬರುವುದಿಲ್ಲ. ಪೊಲೀಸರು ಬಂದರೆ ಅವಮಾನ ಎಂದು ತಿಳಿದುಕೊಳ್ಳಬೇಡಿ ಎಂದು ಅವರು ಹೇಳಿದರು.

ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಹಬ್ಬ ಮಾನವ ಕುಲಕ್ಕೆ ಎಂಬ ಚಿಂತನೆ ಇರಬೇಕು. ಧರ್ಮದ ಹೆಸರಿನಲ್ಲಿ ಟೀಕೆ, ದೂಷಣೆ, ಸಾಮಾಜಿಕ ಜಾಲತಾಣದಲ್ಲಿ ಉತ್ತರ-ಪ್ರತ್ಯುತ್ತರ ಮಾಡುವ ಬದಲು ಎಲ್ಲರೂ ಒಂದಾಗಿ ಬದುಕಲು ಹಬ್ಬಗಳು ಪ್ರೇರಣೆಯಾಗಬೇಕು ಎಂದರು.

ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಸಂವಿಧಾನ ರಕ್ಷಣೆ ಎಲ್ಲರ ಹೊಣೆ. ಅಶಾಂತಿ ನಿರ್ಮಾಣವಾದರೆ ಜನಸ್ನೇಹಿ ಪೊಲೀಸರು ಬೇಕು. ಡ್ರಗ್ಸ್ ಮತ್ತು ಸಾಮಾಜಿಕ ಜಾಲತಾಣದ ನಿಯಂತ್ರಣದಿಂದ ಅಶಾಂತಿ ತಡೆಯಬಹುದು ಎಂದರು.

ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು, ದಶಕಗಳ ಹಿಂದೆ ಎಲ್ಲ ಹಬ್ಬಗಳಲ್ಲಿ ಸರ್ವಧರ್ಮದವರು ಪಾಲ್ಗೊಳ್ಳುವ ವಾತಾವರಣ ಇತ್ತು. ಕೆಲವು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ವಾತಾವರಣ ಕಂಡು ಬರುತ್ತಿರುವುದು ನೋವಿನ ಸಂಗತಿ ಎಂದರು.

ಎಸ್‌ಡಿಪಿಐ ಮುಖಂಡ ಅಬ್ದುಲ್ ಸಿದ್ದಿಕ್ ಕೆ.ಎ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಬಪ್ಪಳಿಗೆ, ಮೌರೀಸ್ ಮಸ್ಕರೇನ್ಹಸ್, ವರ್ತಕರ ಸಂಘದ ಎಂ.ಜಿ ರಫೀಕ್, ಅಬ್ದುಲ್ ಹಮೀದ್ ಸಾಲ್ಮರ, ರಫೀಕ್ ಸವಣೂರು, ಅಶ್ರಫ್ ಕಲ್ಲೇಗ ಅಭಿಪ್ರಾಯ ವ್ಯಕ್ತಪಡಿಸಿದರು. ಸುಳ್ಯದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಮಹಿಳಾ ಠಾಣೆಯ ಎಸ್ಐ ಸುನೀಲ್ ಕುಮಾರ್ ಪಾಲ್ಗೊಂಡಿದ್ದರು. ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.