ಮಂಗಳೂರು: ‘ರಂಗಸಂಗಾತಿ' ಸಾಂಸ್ಕೃತಿಕ ಪ್ರತಿಷ್ಠಾನವು ಸಂಸ್ಥೆಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಸ್ಮರಣಾರ್ಥ ನೀಡುವ `ರಂಗ ಭಾಸ್ಕರ- 2025’ ಪ್ರಶಸ್ತಿಗೆ ಹಿರಿಯ ನಟ, ನಿರ್ದೇಶಕ, ಚಲನಚಿತ್ರ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಶಶಿರಾಜ್ ಕಾವೂರು, ‘ರಂಗ ಸಂಗಾತಿಯ 17ನೇ ವಾರ್ಷಿಕೋತ್ಸವವು ನಗರದ ಸೇಂಟ್ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಇದೇ 7 ರಂದು ಸಂಜೆ 5.30ರಿಂದ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆಯಲಿದೆ. ಈ ಸಮಾರಂಭದಲ್ಲಿ ಲಕ್ಷ್ಮಣ ಮಲ್ಲೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮ ಅಧ್ಯಕಷತೆಯನ್ನು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ವಹಿಸಲಿದ್ದು, ಹರಿಕೃಷ್ಣ ಪುನರೂರು, ಭಾಗವತ ಪಟ್ಲ ಸತೀಶ್ ಶೆಟ್ಟಿ, ರಂಗ ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಅಲ್ವಿನ್ ಡೆಸಾ, ಪುಂಡಲೀಕ ಹೊಸಬೆಟ್ಟು, ಸಂತೋಷ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ’ ಎಂದರು.
‘1962ರಲ್ಲಿ ಬಾಲನಟನಾಗಿ ರಂಗಪ್ರವೇಶ ಮಾಡಿದ ಲಕ್ಷ್ಮಣ ಅವರು 65 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ನಟ, ನಿರ್ದೇಶಕನಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮತ್ತು ತುಳು ಸೇರಿ 30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಧಾರಾವಾಹಿ, ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ರಂಗ ಭಾಸ್ಕರ ಪ್ರಶಸ್ತಿಯು ₹ 15 ಸಾವಿರ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ’ ಎಂದರು.
ಸಂಸ್ಥೆಯ ವಿಶ್ವಸ್ಥ ಮಂಡಳಿಯ ಮತ್ತೊಬ್ಬ ಸದಸ್ಯ ಮೈಮ್ ರಾಮ್‌ದಾಸ್, ‘ಕಾರ್ಯಕ್ರಮದಲ್ಲಿ ಹೆಗ್ಗೋಡಿನ ಜನಮನದಾಟ ತಂಡದವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’ (ನಿರ್ದೇಶನ: ರಂಜಿತ್ ಶೆಟ್ಟಿ ಕುಕ್ಕುಡೆ) ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಎದೆಯ ಹಣತೆ (ನಿರ್ದೇಶನ: ಗಣೇಶ್ ಎಂ.ಹೆಗ್ಗೋಡು) ನಾಟಕ ಪ್ರದರ್ಶಿಸಲಿದ್ದಾರೆ. ರಂಗಾಸಕ್ತರಿಗೆ ಮುಕ್ತ ಪ್ರವೇಶವಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು, ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.