ಉಪ್ಪಿನಂಗಡಿ: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯ ಸಹಿ ನಕಲು ಮಾಡಿ ನೆಕ್ಕಿಲಾಡಿ ಗ್ರಾಮದಲ್ಲಿ 2 ಏಕ ನಿವೇಶನಗಳ ವಾಣಿಜ್ಯ ವಿನ್ಯಾಸ ನಕ್ಷೆಯನ್ನು ಮಾಡಿಕೊಳ್ಳಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ರೈ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಅನಿ ಮಿನೇಜಸ್, ‘ನಕಲಿ ಸಹಿ ಬಳಸಿ ನೆಕ್ಕಿಲಾಡಿ ಗ್ರಾಮದಲ್ಲಿ 2 ಏಕ ನಿವೇಶನಗಳ ವಾಣಿಜ್ಯ ವಿನ್ಯಾಸ ನಕ್ಷೆಗಳನ್ನು ಮಾಡಿಕೊಡಲಾಗಿದೆ. ಬಳಿಕ ವಿನ್ಯಾಸ ನಕ್ಷೆಗಳನ್ನು ರದ್ದುಗೊಳಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೆಕ್ಕಿಲಾಡಿ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಗ್ರಾಮಸ್ಥರಿಗೆ ವಿವರ ನೀಡುವಂತೆ ಕೋರಿದರು.
ಇದಕ್ಕೆ ಪಿಡಿಒ ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿ, ‘ನೆಕ್ಕಿಲಾಡಿ ಗ್ರಾಮದ ಸರ್ವೆ ನಂ. 54/1ರಲ್ಲಿ ಕಲ್ಪನಾ ಎಚ್.ಪಿ.ಅವರಿಗೆ ಸೇರಿದ 0.10 ಎಕರೆ ಜಾಗ ಮತ್ತು ನಾಗೇಶ್ ಕೆ. ಅವರಿಗೆ ಸೇರಿದ 0.06 ಎಕರೆ ವಿಸ್ತೀರ್ಣದ ಜಮೀನುಗಳ ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಗಳಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯ ಸಹಿಯನ್ನು ಪೋರ್ಜರಿ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿ ವಿನ್ಯಾಸ ಅನುಮೋದನೆ ಪಡೆದಿರುವುದು ಕಂಡು ಬಂದಿದೆ. ಸದ್ಯ ಇವುಗಳ ವಿನ್ಯಾಸ ನಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಈ ವಿನ್ಯಾಸಕ್ಕೆ ಪಂಚಾಯಿತಿ ನೀಡಲಾದ 9/11 ಅನ್ನು ರದ್ದುಪಡಿಸಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಪೂರಕವಾಗಿ ಗ್ರಾಮಸ್ಥ ಮಹಮ್ಮದ್ ರಫೀಕ್ ಮಾತನಾಡಿ 9/11 ರದ್ದುಗೊಂಡಿದೆಯೇ ಎಂದು ಪ್ರಶ್ನಿಸಿದರು. ಆಗ ಪಿಡಿಒ ಅದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಆಗ ಮಾತನಾಡಿದ ಅನಿ ಮಿನೇಜಸ್, ಈ ಪೋರ್ಜರಿಯ ಹಿಂದೆ ಯಾರಿದ್ದಾರೆ. ಇದು ನಮ್ಮ ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ತರುವಂತದ್ದು. ಇಂತಹ ಪೋರ್ಜರಿ ಫೈಲ್‌ಗಳು ಇದ್ದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಆಗ ಇತರೇ ಗ್ರಾಮಸ್ಥರು ಧ್ವನಿಗೂಡಿಸಿ ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ನಿರ್ಣಯ ಕೈಗೊಳ್ಳಲು ತಿಳಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಗ್ರಾಮಸ್ಥರಾದ ರೂಪೇಶ್ ರೈ, ಗಣೇಶ್ ದರ್ಬಿ, ಕಲಂದರ್ ಶಾಫಿ ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷರಾದ ಹರೀಶ್ ಡಿ., ಸದಸ್ಯರಾದ ವಿಜಯಕುಮಾರ್, ಪ್ರಶಾಂತ್ ಎನ್., ಕೆ. ರಮೇಶ್ ನಾಕ್, ವೇದಾವತಿ, ಗೀತಾ, ತುಳಸಿ, ಸ್ವಪ್ನ, ರತ್ನಾವತಿ, ಹರೀಶ್ ಕೆ. ಹಾಜರಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪಿಡಿಒ ಪ್ರವೀಣ್ ಕುಮಾರ್ ಸ್ವಾಗತಿಸಿ, ದೇವಪ್ಪ ನಾಯ್ಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.