ಮಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿಯಲ್ಲಿ ಗುರಿ ಸಾಧನೆ ಮಾಡಲು ವಿಫಲವಾದ ಬ್ಯಾಂಕ್‌ಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಮಿತಿ (ಡಿಎಲ್‌ಆರ್‌ಸಿ) ಮತ್ತು ಬ್ಯಾಂಕುಗಳ ಅಭಿವೃದ್ಧಿ ಕುರಿತ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು ಅಂಕಿ ಅಂಶಗಳಿಲ್ಲದೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ನಗರ ಪ್ರದೇಶಗಳಲ್ಲೂ ಪ್ರಚುರವಾಗಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕ್ ಆಫ್ ಬರೋಡದ ಅಧಿಕಾರಿ ನೀಡಿದ ಮಾಹಿತಿಗೆ ಅತೃಪ್ತಿ ವ್ಯಕ್ತಪಡಿಸಿದ ಅವರು ಮುಂದಿನ ತ್ರೈಮಾಸಿಕ ಸಭೆಯ ವೇಳೆ ಇನ್ನಷ್ಟು ಪ್ರಗತಿ ಸಾಧಿಸದೇ ಇದ್ದರೆ ಆ ಮಾಹಿತಿಯನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗುವುದು ಎಂದರು. ಸಭೆಗೆ ಗೈರಾದ ಬ್ಯಾಂಕ್‌ಗಳಿಗೆ ಜಿಲ್ಲಾ ಪಂಚಾಯಿತಿಯಿಂದ ನಿರೀಕ್ಷಿತ ಸಹಕಾರ ಸಿಗಲಾರದು ಎಂದು ಎಚ್ಚರಿಕೆ ನೀಡಿದರು.
ಅ.2ರಿಂದ 15 ದಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಕಾರ್ಮಿಕ ಅಭಿಯಾನ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಶಿಬಿರಗಳು ನಡೆಯಲಿದ್ದು ಅಲ್ಲಿ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೋಂದಣಿ ಮಾಡಿಸಬಹುದು ಎಂದು ತಿಳಿಸಿದ ಅವರು ನಗರದ ವಾರ್ಡ್‌ಗಳಲ್ಲಿ ಫಲಾನುಭವಿಗಳ ನೋಂದಣಿಗೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ ಮುಂದಾದರೆ ಒಂದಷ್ಟು ಮಂದಿಯನ್ನು ನೊಂದಾಯಿಸಬಹುದಾಗಿದೆ ಎಂದರು.
ಗೃಹನಿರ್ಮಾಣಕ್ಕೆ ಸಾಲ ಕೊಡಿ
ಗೃಹನಿರ್ಮಾಣಕ್ಕೆ ಸಮರ್ಪಕವಾಗಿ ಸಾಲ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಬ್ಯಾಂಕ್‌ಗಳಿಗೆ ಸೂಚಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ತಲಾ ₹ 1.20 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಇದು ಸಾಕಾಗುವುದಿಲ್ಲ. ಆದ್ದರಿಂದ ಸಾಲ ಕೊಡಲು ಬ್ಯಾಂಕ್‌ಗಳು ಮುಂದಾಗಬೇಕು ಎಂದು ಅವರು ತಿಳಿಸಿದರು.
ಕೆಂಪು ಕಲ್ಲು ಮತ್ತು ಮರಳಿನ ಅಭಾವದಿಂದಾಗಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಮಂಜೂರಾದ ಸಾಲದ ಮೊತ್ತವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ ಎಂದು ಬ್ಯಾಂಕ್ ಪ್ರತಿನಿಧಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಆದ್ಯತಾ ವಲಯ ಮತ್ತು ಆದ್ಯತೆಯೇತರ ವಲಯಗಳಿಗೆ ಜಿಲ್ಲೆಯಲ್ಲಿ ಜೂನ್ ವೇಳೆಗೆ ಒಟ್ಟು ₹ 14910.39 ಕೋಟಿ ಸಾಲ ವಿತರಿಸಿದ್ದು ಶೇ 92.45ರಷ್ಟು ಪ್ರಗತಿ ಸಾಧಿಸಲಾಗಿದೆ. ಕೃಷಿ ಕ್ಷೇತ್ರದ ಸಾಲ ವಿತರಣೆಯಲ್ಲಿ ಶೇ 85.26ರಷ್ಟು ಪ್ರಗತಿಯಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿ ಶೇ 187.52 ಪ್ರಗತಿಯಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಶೆಟ್ಟಿ ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಶೇ 40.33, ಗೃಹ ಸಾಲದಲ್ಲಿ ಶೇ 44.33 ಪ್ರಗತಿಯಾಗಿದೆ. ಮುದ್ರಾ ಯೋಜನೆಯಡಿ 16664 ಖಾತೆಗಳಿದ್ದು ₹ 223.24 ಕೋಟಿ ಸಾಲ ವಿತರಿಸಲಾಗಿದೆ. ಜನ್‌ಧನ್ ಯೋಜನೆಯಡಿ ಏಪ್ರಿಲ್‌ನಿಂದ ಜೂನ್ ವರೆಗೆ 8075 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ಏಪ್ರಿಲ್‌ನಿಂದ ಜೂನ್ ವರೆಗೆ 31633 ಮಂದಿಯ ನೋಂದಣಿಯಾಗಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.