
ಮಂಗಳೂರು: ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರೂ ಸೇರಿದಂತೆ ಭಾರತೀಯರೆಲ್ಲರೂ ಒಳಗೊಳ್ಳುವಂತೆ ಪ್ರೇರಣೆ ನೀಡಿದವರು ಮಹಾತ್ಮ ಗಾಂಧಿ. ಗಾಂಧೀಜಿ ಶಿಸ್ತು, ನಿಯಮ ಬದ್ಧತೆ, ಸರಳತೆ, ಸಂಯಮ ಮತ್ತು ಪ್ರಾಮಾಣಿಕತೆಯಂತಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಮಂಗಳವಾರ ನಡೆದ ‘ಮಹಾತ್ಮ ಗಾಂಧಿ ಚಿಂತನೆಗಳು ಮತ್ತು ಯುವಜನತೆ’ ಕುರಿತ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧಿ ಸ್ಮಾರಕ ನಿಧಿ ಸಂಚಾಲಕರಾದ ಆಬಿದಾ ಬೇಗಂ ಮತ್ತು ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶೇಷಪ್ಪ ಕೆ. ಮುಖ್ಯ ಅತಿಥಿಗಳಾಗಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್ ಸ್ವಾಗತಿಸಿದರು. ಜ್ಯೋತಿಪ್ರಿಯ ಕಾರ್ಯಕ್ರಮ ನಿರೂಪಿಸಿದರು.
‘ಗಾಂಧಿ ವ್ಯಕ್ತಿತ್ವದ ಸಾತ್ವಿಕ ಸಂದೇಶಗಳು’ ಕುರಿತು ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ, ‘ಶಿಕ್ಷಣದಲ್ಲಿ ಗಾಂಧೀಜಿ ಮಹತ್ವ’ ಕುರಿತು ಆಬಿದಾ ಬೇಗಂ ವಿಷಯ ಮಂಡಿಸಿದರು.
ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಮಂಗಳೂರು ವಿವಿ ಕಾಲೇಜು ದ್ವಿತೀಯ, ಡಾ. ಪಿ.ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದವು.
ವಿವಿಧ ವಿಭಾಗಗಳ ಸಂಯೋಜಕರಾದ ಪ್ರೊ. ಲೋಕೇಶ್‌ನಾಥ, ಪ್ರೊ. ಮೋಹನದಾಸ್, ಶೋಭಾಮಣಿ, ಜ್ಯೋತಿ ಪಿ, ಪ್ರೊ. ದುಗ್ಗಪ್ಪ ಕಜೆಕಾರ್, ಪ್ರೊ. ಕೃಷ್ಣಪ್ರಭಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.