ADVERTISEMENT

ಸಂಬಂಧಿಯ ಕೊಲೆ: ಇಬ್ಬರಿಗೆ ಜೀವಾವಧಿ

ಆಸ್ತಿ ವಿವಾದದಿಂದ ಕುಟುಂಬ ಕಲಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 14:31 IST
Last Updated 29 ಜೂನ್ 2018, 14:31 IST

ಮಂಗಳೂರು: ಆಸ್ತಿ ವಿವಾದದಿಂದ ನಡೆಯುತ್ತಿದ್ದ ಸಂಘರ್ಷ ಅತಿರೇಕಕ್ಕೆ ತಲುಪಿ ಸಂಬಂಧಿಯನ್ನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಸಮೀಪದ ಅರಿಪ್ಪಾಡಿಯ ಇಬ್ಬರು ಯುವಕರಿಗೆ ನಗರದ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಅರಿಪ್ಪಾಡಿ ನಿವಾಸಿಗಳಾದ ಗಿರೀಶ್ (28) ಮತ್ತು ವೆಂಕಟೇಶ್‌ (28) ಶಿಕ್ಷೆಗೊಳಗಾಗಿರುವವರು. ಇವರ ಸಂಬಂಧಿ, ಅರಿಪ್ಪಾಡಿ ನಿವಾಸಿ ಅಣ್ಣು ಮೊಗೇರ ಕೊಲೆಯಾದವರು. 2016ರ ನವೆಂಬರ್‌ 30ರಂದು ಉಜಿರೆ ಬಸ್‌ ನಿಲ್ದಾಣದ ಬಳಿ ಈ ಕೊಲೆ ನಡೆದಿತ್ತು.

ಕೊಲೆಯಾದ ಅಣ್ಣು ಮೊಗೇರ, ಅಪರಾಧಿಗಳಾದ ಗಿರೀಶ್‌ ಮತ್ತು ವೆಂಕಟೇಶ್ ಸಂಬಂಧಿಕರು. ದಾಯಾದಿಗಳ ನಡುವೆ ಆಸ್ತಿಗಾಗಿ ಕಲಹ ನಡೆಯುತ್ತಿತ್ತು. ಆಸ್ತಿ ವ್ಯಾಜ್ಯ ಹೈಕೋರ್ಟ್‌ವರೆಗೂ ತಲುಪಿತ್ತು. ಅಣ್ಣು ಮೊಗೇರ ತಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿ ಅಣ್ಣು ಮೊಗೇರ ಕಾನೂನು ಹೋರಾಟ ನಡೆಸುತ್ತಿದ್ದರು. ಇದು ಅಪರಾಧಿಗಳ ದ್ವೇಷಕ್ಕೆ ಕಾರಣವಾಗಿತ್ತು.

ADVERTISEMENT

2016ರ ನ.30ರಂದು ಅಣ್ಣು ಮೊಗೇರ ಉಜಿರೆ ಪೇಟೆಯಲ್ಲಿರುವ ಮಾಹಿತಿ ಪಡೆದಿದ್ದ ಅಪರಾಧಿಗಳು, ರಾತ್ರಿ 10.15ರ ಸುಮಾರಿಗೆ ಎನ್‌.ಆರ್‌.ಬಾರ್‌ ಸಮೀಪದಲ್ಲಿ ಬಂದು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದರು. ಬೆನ್ನು ಮತ್ತು ಎದೆಗೆ ಗಾಯವಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇರಿಯುವ ಸಮಯದಲ್ಲಿ ಗಿರೀಶ್‌ನ ಕೈಗೂ ಗಾಯವಾಗಿತ್ತು. ಡಿಸೆಂಬರ್‌ 1ರಂದು ಇಬ್ಬರನ್ನೂ ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು, ‘ಗಿರೀಶ್ ಮತ್ತು ವೆಂಕಟೇಶ್‌ ಅಪರಾಧಿಗಳು’ ಎಂದು ಸಾರಿದರು. ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಮೃತರ ಪತ್ನಿ ಸೌಮ್ಯಾ ಮತ್ತು ಮಗು ಸಂತ್ರಸ್ತರ ಪರಿಹಾರ ನಿಧಿಯಿಂದ ನೆರವು ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ರಕ್ತಸಿಕ್ತ ಬಟ್ಟೆ, ಆರೋಪಿಗಳ ಬೈಕ್‌, ಘಟನಾ ಸ್ಥಳದಲ್ಲಿದ್ದ ರಕ್ತದ ಕಲೆ ಸೇರಿದಂತೆ 19 ಸಾಕ್ಷ್ಯಗಳನ್ನು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಒದಗಿಸಲಾಗಿತ್ತು. ಗಿರೀಶ್‌ ಕೈಯಲ್ಲಿದ್ದ ಗಾಯದ ಗುರುತನ್ನು ನ್ಯಾಯಾಲಯ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣನೆಗೆ ತೆಗೆದುಕೊಂಡಿತು.

ಬೆಳ್ತಂಗಡಿ ಪೊಲೀಸ್ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್ ಹರೀಶ್ವಂದ್ರ ಉದ್ಯಾವರ ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.