ADVERTISEMENT

ಲಾಕ್‌ಡೌನ್‌ ನಂತರ ಚಿರತೆ ಓಡಾಟ ಹೆಚ್ಚಳ

ಮಂಗಳೂರು ವಲಯದಲ್ಲಿ 8 ಚಿರತೆಗಳು ಇರುವ ಶಂಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 1:49 IST
Last Updated 19 ನವೆಂಬರ್ 2021, 1:49 IST
ಬೋನಿನಲ್ಲಿ ಬಂದಿಯಾಗಿರುವ ಚಿರತೆ (ಸಾಂದರ್ಭಿಕ ಚಿತ್ರ)
ಬೋನಿನಲ್ಲಿ ಬಂದಿಯಾಗಿರುವ ಚಿರತೆ (ಸಾಂದರ್ಭಿಕ ಚಿತ್ರ)   

ಮಂಗಳೂರು: ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಈಗ ವಾಹನ ಸಂಚಾರ ಹೆಚ್ಚಾಗಿದೆ. ಆದರೆ, ಖಾಲಿ ರಸ್ತೆಗಳಲ್ಲಿ ಠೀವಿಯಿಂದ ಓಡಾಡುತ್ತಿದ್ದ ಚಿರತೆಗಳು, ಈಗಲೂ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಪ್ರಮುಖವಾಗಿ ಮಂಗಳೂರು ಅರಣ್ಯ ವಲಯದಲ್ಲಿ ಇದೀಗ ಚಿರತೆಗಳು ಕಾಣಿಸಿಕೊಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಡಪದವು, ಕುಪ್ಪೆಪದವು, ಮಿಜಾರು, ಗಂಜಿಮಠ ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸುತ್ತ ಒಟ್ಟು 8 ಚಿರತೆಗಳ ಓಡಾಡುತ್ತಿವೆ ಎನ್ನುವ ಶಂಕೆ ಅರಣ್ಯ ಇಲಾಖೆಯದ್ದು.

ಲಾಕ್‌ಡೌನ್‌ ಸಮಯದಲ್ಲಿ ರಸ್ತೆಗಳು ಖಾಲಿ ಇರುತ್ತಿದ್ದವು. ಜನವಸತಿ ಪ್ರದೇಶಗಳಲ್ಲಿ ನಾಯಿ, ಇತರ ಪ್ರಾಣಿಗಳು ಸುಲಭವಾಗಿ ಸಿಗುತ್ತಿದ್ದುದರಿಂದ ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಚಿರತೆಗಳು ನಿರ್ಭಯದಿಂದ ಬರುತ್ತಿದ್ದವು. ಈಗಲೂ ಅದನ್ನೇ ಮುಂದುವರಿಸಿರುವ ಸಾಧ್ಯತೆ ಇದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ತಿಳಿಸಿದ್ದಾರೆ.

ADVERTISEMENT

ಕೋವಿಡ್–19ಗಿಂತ ಮೊದಲು ಮಂಗಳೂರು ವಲಯದಲ್ಲಿ ಎರಡು ಚಿರತೆಗಳು ಮಾತ್ರ ಕಾಣಿಸಿಕೊಂಡಿದ್ದವು. ಆದರೆ, ಇದೀಗ 8 ಚಿರತೆಗಳು ಓಡಾಡುತ್ತಿರುವ ಶಂಕೆ ಇದೆ. 15 ದಿನಗಳಲ್ಲಿ ಕುಪ್ಪೆಪದವು ಹಾಗೂ ಮಿಜಾರು ಪ್ರದೇಶದಲ್ಲಿ ನಿತ್ಯ ನಾಯಿಗಳು ಸತ್ತಿರುವ ಪ್ರಕರಣ ವರದಿಯಾಗುತ್ತಿವೆ. ಇದು ಚಿರತೆಗಳ ಓಡಾಟಕ್ಕೆ ಪುಷ್ಟಿ ನೀಡುತ್ತಿದೆ.

ತ್ಯಾಜ್ಯವೂ ಕಾರಣ: ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಹೆಚ್ಚಾಗಿದೆ. ಇದರಿಂದ ಬೀದಿ ನಾಯಿಗಳು ಹಾಗೂ ಕಾಡು ಹಂದಿಗಳ ಸಂಖ್ಯೆಯೂ ವೃದ್ಧಿಸಿದೆ. ಹಾಗಾಗಿ ನಾಯಿ, ಹಂದಿಗಳನ್ನು ಬೇಟೆಯಾಡಲು ಚಿರತೆಗಳು ಬರುತ್ತಿವೆ.

‘ಅರಣ್ಯ ಇಲಾಖೆ ಚಿರತೆಗಳ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಂಡಿದ್ದು, ಹಲವೆಡೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಚಿರತೆಗಳ ಓಡಾಟ ಕಂಡು ಬಂದಿದೆ. ಎಲ್ಲೆಲ್ಲಿ ಚಿರತೆಗಳು ಓಡಾಡುತ್ತವೆಯೋ ಅಂತಹ ಕಡೆಗಳಲ್ಲಿ ಬೋನುಗಳನ್ನು ಇಡಲಾಗಿದೆ. ತಿಂಗಳ ಹಿಂದೆ ತೋಡಾರು ಬಳಿ ಚಿರತೆಯೊಂದನ್ನು ಹಿಡಿದು, ಕಾಡಿಗೆ ಬಿಡಲಾಗಿತ್ತು’ ಎಂದು ಪ್ರಶಾಂತ್‌ ಪೈ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಬೋನು: ಬುಧವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಈಗಾಗಲೇ ಐದು ಬೋನುಗಳನ್ನು ಇಡಲಾಗಿದ್ದು, ಹೆಚ್ಚುವರಿಯಾಗಿ ಇನ್ನೂ ಐದು ಬೋನುಗಳನ್ನು ಇಡಲು ನಿರ್ಧರಿಸಲಾಗಿದೆ.

ಈಚೆಗೆ ಕುಂಪಲದಲ್ಲೂ ಚಿರತೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಜನರ ದೂರಿನಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದಾರೆ. ಆದರೆ, ಚಿರತೆಯ ಸುಳಿವು ಪತ್ತೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.