ADVERTISEMENT

ರಾಜಕೀಯ ಜೀವನಕ್ಕೆ ಫೆರ್ನಾಂಡಿಸ್ ಆದರ್ಶ: ಬ್ರಿಜೇಶ್ ಚೌಟ

ಇಡುಗಂಟಿಗೆ ಮಹಿಳೆಯರಿಂದ, ಚುನಾವಣಾ ವೆಚ್ಚಕ್ಕೆ ನಿವೃತ್ತ ಸೈನಿಕನ ಕೊಡುಗೆ ಭಾವುಕ ಕ್ಷಣ: ಚೌಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 3:55 IST
Last Updated 25 ಏಪ್ರಿಲ್ 2024, 3:55 IST
ಬ್ರಿಜೇಶ್‌ ಚೌಟ
ಬ್ರಿಜೇಶ್‌ ಚೌಟ   

ಮಂಗಳೂರು: ರಾಜಕೀಯದಲ್ಲಿ ಅನೇಕ ಮಾದರಿಗಳನ್ನು ಹಾಕಿಕೊಟ್ಟ ಕೇಂದ್ರದ ಮಾಜಿ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಆದರ್ಶಗಳನ್ನು ರಾಜಕೀಯ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಂಗಳೂರಿನವರಾದ ಜಾರ್ಜ್‌ ಫೆರ್ನಾಂಡಿಸ್‌ ರಕ್ಷಣಾ ಸಚಿವರಾಗಿ ಹೆಸರು ಮಾಡಿದ್ದರು. ಕೇಂದ್ರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ಓದಿದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲೇ ಓದಿದ ನಾನು ಸಾಮಾನ್ಯ ಕುಟುಂಬದಿಂದ ಬಂದವ. ಮನೆಯಲ್ಲಿ ರಾಜಕೀಯದಲ್ಲಿ ಕೆಲಸ ಮಾಡಿದವರು ಯಾರೂ ಇಲ್ಲ. ಆದರೂ ಪ್ರತಿಷ್ಠಿತ ಕ್ಷೇತ್ರವೆಂದೇ ಹೆಸರಿರುವ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಅವಕಾಶ ಲಭಿಸಿರುವುದು ಅದೃಷ್ಟ’ ಎಂದರು. 

‘ಚುನಾವಣಾ ಕಣ ಅತ್ಯುತ್ತಮ ಅನುಭವಗಳನ್ನು ನೀಡಿದೆ. ನಾಮಪತ್ರ ಸಲ್ಲಿಸುವ ಮೊದಲು ಮೂವತ್ತರಷ್ಟು ಮಹಿಳೆಯರು ಇಡುಗಂಟಿಗಾಗಿ ಹಣ ತಂದುಕೊಟ್ಟಿದ್ದರು. ಮೀನು ಮಾರಾಟ ಮಾಡುವವರು, ಹೂ ಮಾರುವವರು ಮತ್ತಿತರರು ಆ ಗುಂಪಿನಲ್ಲಿ ಇದ್ದರು. ಅದು ತುಂಬ ಭಾವನಾತ್ಮಕ ಕ್ಷಣವಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉತ್ತಮ ಯೋಜನೆಗಳಿಂದ ಅವರು ಪ್ರೇರೇಪಿತರಾಗಿದ್ದರು’ ಎಂದು ಚೌಟ ತಿಳಿಸಿದರು.

ADVERTISEMENT

‘ದೇಶದ ಮಹಿಳೆಯರನ್ನು ನರೇಂದ್ರ ಮೋದಿ ಸ್ತ್ರೀ ಶಕ್ತಿ ಎಂದು ಬಣ್ಣಿಸಿದ್ದಾರೆ. ಇಡುಗಂಟಿಗಾಗಿ ಹಣ ಕೊಟ್ಟ ತಾಯಂದಿರ ಮಗನಂತೆ ಚುನಾವಣೆಯಲ್ಲಿ ಗೆದ್ದ ನಂತರ ನಾನು ಕೆಲಸ ಮಾಡುವೆ. ಕ್ಷೇತ್ರದ ತಾಯಂದಿರ ಭದ್ರತೆ ನನ್ನ ಜವಾಬ್ದಾರಿ. ಸೈನಿಕರು ನರೇಂದ್ರ ಮೋದಿ ಅವರನ್ನು ತಮ್ಮ ಪರಿವಾರದವರು ಎಂದೇ ತಿಳಿದುಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದಲ್ಲಿ ನಿವೃತ್ತ ವಾಯುಪಡೆ ಸೈನಿಕ ಚುನಾವಣಾ ವೆಚ್ಚಕ್ಕೆಂದು ಒಂದು ತಿಂಗಳ ಪಿಂಚಣಿ ಮೊತ್ತವನ್ನು ನೀಡಿದ್ದಾರೆ. ಅದು ಕೂಡ ಭಾವುಕ ಕ್ಷಣವಾಗಿತ್ತು’ ಎಂದರು.

ಹಿಂದುತ್ವಕ್ಕೆ ಬದ್ಧನಾಗಿದ್ದುಕೊಂಡೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇನೆ. ವಿಕಸಿದ ಭಾರತದಂತೆ ವಿಕಸಿತ ದಕ್ಷಿಣ ಕನ್ನಡ ನನ್ನ ಕನಸು. ಮಹಿಳೆಯರಿಗೆ ಉದ್ಯೋಗ ಸೃಷ್ಟಿ, ಗುಜರಾತ್‌ನ ಜಾಮ್ ನಗರದಲ್ಲಿ ಇರುವಂತೆ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ, ದೇವಸ್ಥಾನಗಳ ಬ್ರಾಂಡಿಂಗ್ ಹೆಚ್ಚಿಸುವ ಯೋಜನೆ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ವಿವರಿಸಿದರು. 

ಮೂರು ಮತ್ತು ಒಂಬತ್ತು...

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಮಂತ್ರಿ ಮಾಡುವುದು ಬಿಜೆಪಿಯ ಸಂಕಲ್ಪ. ನನ್ನ ಚುನಾವಣಾ ಕ್ರಮಸಂಖ್ಯೆಯೂ ಮೂರು. ಮತದಾನದ ದಿನ ಪ್ರತಿ ಬೂತ್‌ನಲ್ಲೂ ಮೊದಲ ಒಂಬತ್ತು ಮತಗಳು ಮಹಿಳೆಯರದ್ದಾಗಬೇಕು ಎಂಬುದು ನನ್ನ ಆಸೆ. ಈ ಹಿನ್ನೆಲೆಯಲ್ಲಿ ಒಂದೊಂದು ಬೂತ್‌ನಲ್ಲೂ ಬೇಗನೇ ತೆರಳಿ ಒಂಬತ್ತು ಮಂದಿ ಮಹಿಳೆಯರು ಮತ ಹಾಕುವಂತೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಇಸ್ಲಾಮಿಕ್ ಭಯೋತ್ಪಾದನೆ ತಡೆಗೆ ಯತ್ನ

ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ಯುವಕರಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಬಿತ್ತುವ ಹುನ್ನಾರವನ್ನು ತಡೆಯಲು ಕಾರ್ಯಯೋಜನೆ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ‘ಜಿಲ್ಲೆಯ ಮೂಲೆಮೂಲೆಗಳಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಇದೆ. ಮುಸ್ಲಿಂ ಯುವಕರಲ್ಲಿ ಸಮಾಜವಿರೋಧ ಮತ್ತು ದೇಶವಿರೋಧದ ವಿಷಬೀಜ ಬಿತ್ತುವ ಕೆಲಸ ಆಗಬಾರದು ಎಂಬ ಆಶಯ ನನ್ನದು. ಹೀಗಾಗಿ ಇಂಥ ಚಿಂತನೆ ಮೂಡಿದೆ’ ಎಂದರು. ‘ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆದ ನಂತರ ಪಿಎಫ್‌ಐ ಚಟುವಟಿಕೆ ಮೇಲೆ ಕೇಂದ್ರ ನಿಗಾ ಇರಿಸಿತ್ತು. ಸಂಘಟನೆಯ ಮೇಲೆ ನಿಷೇಧ ಹೇರಿದ ನಂತರ ಸಮಾಜಘಾತುಕರನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಶಕ್ತಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ’ ಎಂದು ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.